* ಶಾರ್ಜಾ ಮೈದಾನದಲ್ಲಿಂದು ಡೆಲ್ಲಿ ವರ್ಸಸ್ ಮುಂಬೈ ಹೈವೋಲ್ಟೇಜ್ ಕದನ* ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಹಾತೊರೆಯುತ್ತಿದೆ ಡೆಲ್ಲಿ ಕ್ಯಾಪಿಟಲ್ಸ್‌* ಮುಂಬೈ ತಂಡಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ

ಶಾರ್ಜಾ(ಅ.02): ಕೋಲ್ಕತ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ದ ಪಂಜಾಬ್ ಕಿಂಗ್ಸ್‌ (Punjab Kings) ತಂಡವು ಗೆಲುವು ಸಾಧಿಸುತ್ತಿದ್ದಂತೆಯೇ ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪ್ಲೇ ಆಫ್ ಹಂತಕ್ಕೆ ಅರ್ಹತೆಗಿಟ್ಟಿಸಿಕೊಂಡಿದೆ.

ಶನಿವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಜಯಗಳಿಸಿ ಅಗ್ರ 2ರಲ್ಲಿ ಉಳಿದುಕೊಳ್ಳಲು ಎದುರು ನೋಡುತ್ತಿದೆ. ಪ್ಲೇ ಆಫ್‌ನ ಅಗ್ರ ಎರಡು ತಂಡಗಳು ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಕಾದಾಡಲಿವೆ. ಆ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡವು ನೇರವಾಗಿ ಫೈನಲ್‌ಗೆ ಲಗ್ಗೆಯಿಡಲಿದೆ. ಇನ್ನು ಸೋತ ತಂಡಕ್ಕೂ ಮತ್ತೊಂದು ಅವಕಾಶ ಸಿಗಲಿದೆ. ಹೀಗಾಗಿ ಅಗ್ರ 2 ಸ್ಥಾನ ಕಾಯ್ದುಕೊಳ್ಳಲು ತಂಡಗಳು ಪೈಪೋಟಿ ನಡೆಸಲಿವೆ

Scroll to load tweet…

ಇದೆಲ್ಲದರ ನಡುವೆ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡಕ್ಕಿದು ಇದು ಮಾಡು ಇಲ್ಲವೇ ಮಡಿ ಪಂದ್ಯ. ರೋಹಿತ್‌ ಶರ್ಮಾ (Rohit Sharma) ಪಡೆ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಸೋತರೆ ಬಹುತೇಕ ಹೊರಬಿದ್ದಂತೆಯೇ ಲೆಕ್ಕ. ಹೀಗಾಗಿ ಡೆಲ್ಲಿ ತಂಡಕ್ಕೆ ಪ್ರಬಲ ಪೈಪೋಟಿ ನೀಡಲು ಮುಂಬೈ ಇಂಡಿಯನ್ಸ್‌ ಸಜ್ಜಾಗಿದೆ.

IPL 2021: ರಾಹುಲ್ ಹಾಫ್ ಸೆಂಚುರಿ, ಶಾರುಖ್ ಭರ್ಜರಿ ಸಿಕ್ಸರ್‌ನಿಂದ ಪಂಜಾಬ್‌ಗೆ 5 ವಿಕೆಟ್ ಗೆಲುವು

ಕಳೆದ ಪಂದ್ಯದಲ್ಲಿ ಡೆಲ್ಲಿ, ಕೆಕೆಆರ್‌ ವಿರುದ್ಧ ಸೋಲುಂಡಿತ್ತು. ಕೆಕೆಆರ್‌ನ ಬೌಲರ್‌ಗಳು ನಿಧಾನಗತಿಯ ಪಿಚ್‌ನ ಸಂಪೂರ್ಣ ಲಾಭ ಪಡೆದಿದ್ದರು. ಮುಂಬೈ ಸಹ ಕೆಕೆಆರ್‌ ಬಳಸಿದ ಯೋಜನೆಯನ್ನೇ ಬಳಸಿಕೊಂಡು ಡೆಲ್ಲಿಯನ್ನು ಕಟ್ಟಿಹಾಕಲು ಎದುರು ನೋಡುತ್ತಿದೆ. ಮತ್ತೊಂದೆಡೆ ಮುಂಬೈಗೂ ನಿಧಾನಗತಿಯ ಪಿಚ್‌ನಲ್ಲಿ ರನ್‌ ಗಳಿಸುವುದು ಕಷ್ಟವಾಗಬಹುದು. ತಂಡದ ಬಹುತೇಕ ಬ್ಯಾಟ್ಸ್‌ಮನ್‌ಗಳು ಲಯ ಕಳೆದುಕೊಂಡಿದ್ದು, ಡೆಲ್ಲಿಯ ತ್ರಿವಳಿ ಸ್ಪಿನ್ನರ್‌ಗಳಾದ ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌ ಹಾಗೂ ಲಲಿತ್‌ ಯಾದವ್‌ ದಾಳಿ ಎದುರಿಸಲು ಪರದಾಡಿದರೆ ಅಚ್ಚರಿಯಿಲ್ಲ. ನಾಯಕ ರೋಹಿತ್‌ ಶರ್ಮಾ ಹಾಗೂ ಆಲ್ರೌಂಡರ್‌ ಕೀರನ್‌ ಪೊಲ್ಲಾರ್ಡ್‌ ಮೇಲೆ ಮುಂಬೈ ಸಂಪೂರ್ಣವಾಗಿ ಅವಲಂಬಿತಗೊಂಡಿದೆ.

Scroll to load tweet…

ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವು 11 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 4 ಸೋಲುಗಳೊಂದಿಗೆ 14 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನೊಂದು ಕಡೆ 5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವು 11 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 6 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಸ್ಥಳ: ಶಾರ್ಜಾ
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌