ಬೆಂಗಳೂರು(ಏ.04): ಯುಎಇನಲ್ಲಿ ನಡೆದ 13ನೇ ಆವೃತ್ತಿಯಲ್ಲಿ ಸಾಧಾರಣ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಮೊದಲ ಬಾರಿಗೆ ಲೀಗ್‌ ಹಂತದಲ್ಲೇ ಹೊರಬಿದ್ದು ಆಘಾತ ಅನುಭವಿಸಿತ್ತು. ಈ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಲು ಸಿಎಸ್‌ಕೆ ವಿಫಲವಾಗಿತ್ತು. 

2021ರ ಐಪಿಎಲ್‌ನಲ್ಲಿ ಎಂ.ಎಸ್‌.ಧೋನಿ ನೇತೃತ್ವದ ಸಿಎಸ್‌ಕೆ ತಮ್ಮ ಎಂದಿನ ಶೈಲಿಯಲ್ಲಿ ಅಬ್ಬರದ ಆಟವಾಡಿ ಪುಟಿದೇಳಲು ಹಾತೊರೆಯುತ್ತಿದೆ. ಧೋನಿ ತಂಡಕ್ಕೆ ಪುಟಿದೇಳುವ ಸಾಮರ್ಥ್ಯ ಖಂಡಿತ ಇದೆ. ಆದರೆ ಹಿರಿಯರಿಂದಲೇ ಕೂಡಿರುವ ತಂಡ ಯುವಕರ ಆರ್ಭಟಕ್ಕೆ ಎದೆಯೊಡ್ಡಿ ನಿಲ್ಲುತ್ತಾ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಪ್ರಾಬಲ್ಯ: 2020ರ ಐಪಿಎಲ್‌ನಲ್ಲಿ ಸುರೇಶ್‌ ರೈನಾ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಿತ್ತು. ಆದರೆ ಈ ವರ್ಷ ರೈನಾ ವಾಪಸಾಗಿದ್ದಾರೆ. ಜೊತೆಗೆ ರಾಬಿನ್‌ ಉತ್ತಪ್ಪ, ರವೀಂದ್ರ ಜಡೇಜಾ, ಧೋನಿ, ಅಂಬಟಿ ರಾಯುಡು, ಫಾಫ್‌ ಡು ಪ್ಲೆಸಿಯಂತಹ ಅನುಭವಿ ಆಟಗಾರರ ದಂಡೇ ತಂಡದಲ್ಲಿದೆ. ಬೌಲಿಂಗ್‌ ವಿಭಾಗವೂ ಟಿ20 ತಜ್ಞರಿಂದ ಕೂಡಿದೆ. ಲುಂಗಿ ಎನ್‌ಗಿಡಿ, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಹರ್‌, ಡ್ವೇನ್‌ ಬ್ರಾವೋ ಇದ್ದಾರೆ.

IPL 2021: ಮುಂಬೈ ಇಂಡಿಯನ್ಸ್‌ನಲ್ಲಿದ್ದಾರೆ ಮ್ಯಾಚ್‌ ವಿನ್ನರ್‌ಗಳ ದಂಡು

ದೌರ್ಬಲ್ಯ: ವೇಗಿ ಜೋಶ್‌ ಹೇಜಲ್‌ವುಡ್‌ ದಿಢೀರನೆ ಐಪಿಎಲ್‌ನಿಂದ ಹೊರಬಿದ್ದಿರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಅಲ್ಲದೇ ಧೋನಿ, ತಾಹಿರ್‌, ರಾಯುಡು ಹೆಚ್ಚೂ ಕಡಿಮೆ 6 ತಿಂಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್‌ ಆಡಿಲ್ಲ. ಜಡೇಜಾ, ಬ್ರಾವೋ ಗಾಯದಿಂದ ಈಗಷ್ಟೇ ಚೇತರಿಸಿಕೊಂಡಿದ್ದು ಅವರಿಂದ ಪೂರ್ಣ ಪ್ರಮಾಣದ ಪ್ರದರ್ಶನ ಮೂಡಿಬರಲಿದೆಯೇ ಎನ್ನುವ ಸಂಶಯವಿದೆ. ತಂಡದ ಸಮತೋಲನದಲ್ಲಿ ಸ್ವಲ್ಪ ಸಮಸ್ಯೆಯಾದರೂ ಸಿಎಸ್‌ಕೆಗೆ ಹಿನ್ನಡೆ ಆಗೋದು ಖಚಿತ.

ಬಲಿಷ್ಠ ಪ್ಲೇಯಿಂಗ್‌ ಇಲೆವೆನ್‌

ಉತ್ತಪ್ಪ, ಡು ಪ್ಲೆಸಿ, ರಾಯುಡು, ಗಾಯಕ್ವಾಡ್‌, ಧೋನಿ, ಮೋಯಿನ್‌/ಬ್ರಾವೋ, ಜಡೇಜಾ, ಕರ್ರನ್‌, ಶಾರ್ದೂಲ್‌, ದೀಪಕ್‌ ಚಹರ್‌, ತಾಹಿರ್‌/ಎನ್‌ಗಿಡಿ