ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಸ್ಟಾರ್ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಆರ್‌ಸಿಬಿ ಬಯೋ ಬಬಲ್ ಸೇರಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಏ.17): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲೆರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಮತ್ತೊಂದು ಶುಭ ಸುದ್ದಿ ಹೊರಬಿದ್ದಿದೆ. ಕೋವಿಡ್ ಸೋಂಕಿಗೆ ಒಳಗಾಗಿದ್ದು ಸ್ಟಾರ್ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ಇಂದು(ಏ.17)ರಂದು ಆರ್‌ಸಿಬಿ ತಂಡ ಕೂಡಿಕೊಂಡಿದ್ದಾರೆ.
ಡೇನಿಯಲ್ ಸ್ಯಾಮ್ಸ್‌ಗೆ ಕೋವಿಡ್ 19 ಸೋಂಕು ದೃಢಪಟ್ಟಿರುವುದಾಗಿ ಏಪ್ರಿಲ್ 07ರಂದು ಆರ್‌ಸಿಬಿ ಖಚಿತಪಡಿಸಿತ್ತು. ಪರಿಣಾಮ 28 ವರ್ಷದ ಆಸ್ಟ್ರೇಲಿಯಾದ ಆಲ್ರೌಂಡರ್ ಡೇನಿಯಲ್ ಸ್ಯಾಮ್ಸ್ ಐಸೋಲೇಷನ್‌ಗೆ ಒಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದೀಗ ಸ್ಯಾಮ್ಸ್ ಕೊರೋನಾ ಸೋಂಕಿನಿಂದ ಗುಣಮುಖರಾಗಿರುವುದಾಗಿ ಆರ್‌ಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಡೇನಿಯಲ್ ಸ್ಯಾಮ್ಸ್ ಕೋವಿಡ್ 19 ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರು ಏಪ್ರಿಲ್ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿದ್ದು, ಬಯೋ ಬಬಲ್ ಸೇರಿಕೊಂಡಿದ್ದಾರೆ. ಬಿಸಿಸಿಐನ ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳನ್ನು ಪಾಲಿಸಲಾಗಿದ್ದು, ಆರ್‌ಸಿಬಿ ವೈದ್ಯಕೀಯ ಸಿಬ್ಬಂದಿಯ ಸ್ಯಾಮ್ಸ್ ಸಂಪೂರ್ಣ ಫಿಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಆರ್‌ಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದೇ ಓವರ್‌ನಲ್ಲಿ 3 ವಿಕೆಟ್: ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟ ಶಹಬಾಜ್ ಅಹಮದ್
13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯವಾದ ಬಳಿಕ ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹರ್ಷಲ್ ಪಟೇಲ್ ಹಾಗೂ ಡೇನಿಯಲ್ ಸ್ಯಾಮ್ಸ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ಹರ್ಷಲ್ ಪಟೇಲ್ ತಮ್ಮ ಚಾಣಾಕ್ಷ ಬೌಲಿಂಗ್ ದಾಳಿಯ ಮೂಲಕ ಈಗಾಗಲೇ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಡೇನಿಯಲ್ ಸ್ಯಾಮ್ಸ್ ತಂಡ ಕೂಡಿಕೊಂಡಿರುವುದರಿಂದ ಆರ್‌ಸಿಬಿ ಮತ್ತಷ್ಟು ಬಲ ಬಂದಂತೆ ಆಗಿದೆ. ಡೇನಿಯಲ್ ಕ್ರಿಶ್ಚಿಯನ್ ಬದಲಿಗೆ ಡೇನಿಯಲ್ ಸ್ಯಾಮ್ಸ್ ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
