ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಭಾರತ ತಂಡ ಈ ಕ್ರೀಡಾಂಗಣದಲ್ಲಿ ಒಂಬತ್ತು ದಶಕಗಳಿಂದ ಟೆಸ್ಟ್ ಗೆಲುವು ಕಂಡಿಲ್ಲ.
ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್‌ಸನ್-ತೆಂಡೂಲ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಓಲ್ಡ್ ಟ್ರಾಫೋರ್ಡ್ ಆತಿಥ್ಯ ವಹಿಸಿದೆ. ಟೂರ್ನಿಯಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸತತ ನಾಲ್ಕನೇ ಬಾರಿಗೆ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಟೆಸ್ಟ್ 2 ಕಾರಣಗಳಿಂದಾಗಿ ಭಾರತಕ್ಕೆ ಮಹತ್ವದ್ದು. ಒಂದು, ಭಾರತ ಈ ಕ್ರೀಡಾಂಗಣದಲ್ಲಿ 9 ದಶಕದಲ್ಲಿ ಒಮ್ಮೆಯೂ ಟೆಸ್ಟ್ ಗೆದ್ದಿಲ್ಲ. ಮತ್ತೊಂದು, ಈ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಸರಣಿಯನ್ನೇ ಕಳೆದುಕೊಳ್ಳಲಿದೆ. ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಶೋಯೆಬ್ ಬಷೀರ್ ಬದಲಿಗೆ ಡಾವ್ಸನ್ ತಂಡ ಕೂಡಿಕೊಂಡಿದ್ದಾರೆ.
ಇನ್ನು ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಕರುಣ್ ನಾಯರ್, ಆಕಾಶ್‌ದೀಪ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಹೊರಬಿದ್ದಿದ್ದಾರೆ. ಕರುಣ್ ಬದಲಿಗೆ ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಶಾರ್ದೂಲ್ ಠಾಕೂರ್ ಹಾಗೂ ಆಕಾಶ್‌ದೀಪ್ ಬದಲಿಗೆ ಅನ್ಶೂಲ್ ಕಂಬೋಜ್ ತಂಡ ಕೂಡಿಕೊಂಡಿದ್ದಾರೆ.
ಆಟಗಾರರ ಪಟ್ಟಿ
ಭಾರತ: ಕೆ ಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಅನ್ಶುಲ್ ಕಂಬೋಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್(ಆಡುವ 11): ಜ್ಯಾಕ್ ಕ್ರಾವ್ಲಿ, ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್. ಡಾವ್ಸನ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್
ಪಿಚ್ ರಿಪೋರ್ಟ್
ಮ್ಯಾಂಚೆಸ್ಟರ್ ಕ್ರೀಡಾಂಗಣದ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದೆ. ಇಲ್ಲಿ ಹೆಚ್ಚಿನ ಬೌನ್ಸರ್‌ಗಳೂ ಕಂಡುಬರಲಿದೆ. ಆದರೆ ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
