* ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್‌ಗೆ ಗಾಯ* ಪಾಕಿಸ್ತಾನ ಪ್ರವಾಸದಲ್ಲಿರುವ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಷ್‌*ಈಗಾಗಲೇ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ 

ಲಾಹೋರ್‌(ಮಾ.29): ಪಾಕಿಸ್ತಾನ ಪ್ರವಾಸದಲ್ಲಿರುವ ಆಸ್ಪ್ರೇಲಿಯಾ ತಾರಾ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌ (Mitchell Marsh) ಗಾಯಗೊಂಡಿದ್ದು, ಆತಿಥೇಯರ ವಿರುದ್ಧದ 3 ಪಂದ್ಯಗಳ ಏಕದಿನ ಹಾಗೂ ಏಕೈಕ ಟಿ20 ಪಂದ್ಯದ ಸರಣಿಯಿಂದ ಹೊರಬಿದ್ದಿದ್ದಾರೆ. ಈ ಬಗ್ಗೆ ತಂಡದ ನಾಯಕ ಆ್ಯರೋನ್‌ ಫಿಂಚ್‌ (Aaron Finch) ಮಾಹಿತಿ ನೀಡಿದ್ದು, ‘ಗಾಯದ ಪ್ರಮಾಣ ಇನ್ನಷ್ಟೇ ಗೊತ್ತಾಗಬೇಕಿದೆ. ಸರಣಿಯಲ್ಲಿ ಆಡುವ ಬಗ್ಗೆ ಖಚಿತತೆ ಇಲ್ಲ’ ಎಂದಿದ್ದಾರೆ. ಮಿಚೆಲ್ ಮಾರ್ಷ್‌ ಈ ಆವೃತ್ತಿಯ ಐಪಿಎಲ್‌ನಿಂದಲೂ ಹೊರಬೀಳುವ ಆತಂಕ ಎದುರಾಗಿದೆ.

15ನೇ ಆವೃತ್ತಿಯ ಐಪಿಎಲ್‌ ಆಟಗಾರರ ಮೆಗಾ ಹರಾಜಿನಲ್ಲಿ 6.5 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಪಾಲಾಗಿದ್ದ ಮಾರ್ಷ್‌‍, ಏಪ್ರಿಲ್‌ 6ರ ಬಳಿಕ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿತ್ತು. ಮಿಚೆಲ್‌ ಮಾರ್ಷ್‌ ಈಗಾಗಲೇ ಆಸ್ಟ್ರೇಲಿಯಾ ತಂಡದೊಂದಿಗೆ ಪಾಕಿಸ್ತಾನ ಪ್ರವಾಸದಲ್ಲಿರುವುದರಿಂದಾಗಿ, 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಮೊದಲ ಪಂದ್ಯದಿಂದ ಹೊರಗುಳಿದ್ದಿದ್ದರು. ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ದದ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.

ಲಾಹೋರ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಮಿಚೆಲ್ ಮಾರ್ಷ್‌ ಗಾಯಗೊಂಡಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ ಅವರು ಪಾಲ್ಗೊಳ್ಳುತ್ತಾರೆಯೇ ಎನ್ನುವುದರ ಬಗ್ಗೆ ನಾವು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಫಿಂಚ್ ಹೇಳಿದ್ದಾರೆ. ಒಂದು ವೇಳೆ ಮಿಚೆಲ್ ಮಾರ್ಷ್‌ ಪಾಕಿಸ್ತಾನ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹೊರಬಿದ್ದರೆ, 22 ವರ್ಷದ ಆಲ್ರೌಂಡರ್‌ ಕ್ಯಾಮರೋನ್ ಗ್ರೀನ್‌, ಆಸ್ಟ್ರೇಲಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ

Scroll to load tweet…

ಒಂದು ವೇಳೆ ಮಿಚೆಲ್ ಮಾರ್ಷ್‌ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಲವಾದ ಪೆಟ್ಟುಬಿದ್ದಂತೆ ಆಗಲಿದೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ವಿದೇಶಿ ಆಟಗಾರರನ್ನು ಹೊಂದಿದೆ. ಈ ಪೈಕಿ ಮುಂಬೈ ಇಂಡಿಯನ್ಸ್‌ ವಿರುದ್ದದ ಪಂದ್ಯದಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರು ಮಾತ್ರ ಕಣಕ್ಕಿಳಿದಿದ್ದರು. ಈ ಮೊದಲೇ ನಿಗದಿಯಾದಂತೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್ (David Warner) ಹಾಗೂ ಮಿಚೆಲ್ ಮಾರ್ಷ್‌ ಏಪ್ರಿಲ್ 06ರಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಕೂಡಿಕೊಳ್ಳಬೇಕಿತ್ತು.

GT vs LSG: ಸಾಕಷ್ಟು ದಿನಗಳ ಬಳಿಕ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ, ಟ್ರೋಲ್ ಮಾಡಿದ ಜಾಫರ್..!

ಇನ್ನೊಂದೆಡೆ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎಂಗಿಡಿ ಹಾಗೂ ಮುಷ್ತಾಫಿಜುರ್ ರೆಹಮಾನ್ ಮೊದಲ ಪಂದ್ಯದ ವೇಳೆ ಕ್ವಾರಂಟೈನ್‌ನಲ್ಲಿದ್ದರಿಂದ ಮುಂಬೈ ವಿರುದ್ದ ಪಂದ್ಯಕ್ಕೆ ಕಣಕ್ಕಿಳಿದಿರಲಿಲ್ಲ. ಆದರೆ ಡೆಲ್ಲಿ ಪಾಲಿನ ಎರಡನೇ ಪಂದ್ಯವು ಏಪ್ರಿಲ್ 02ರಂದು ನಡೆಯಲಿದ್ದು, ಈ ಪಂದ್ಯದ ವೇಳೆಗೆ ಈ ಇಬ್ಬರು ವಿದೇಶಿ ಆಟಗಾರರು ಆಯ್ಕೆಗೆ ಲಭ್ಯರಿರಲಿದ್ದಾರೆ. ಇದೆಲ್ಲದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ದಕ್ಷಿಣ ಆಫ್ರಿಕಾದ ಮಾರಕ ವೇಗಿ ಏನ್ರಿಚ್ ನೋಕಿಯ ಅವರ ಫಿಟ್ನೆಸ್‌ ವಿಚಾರ. ಐಪಿಎಲ್ ಟೂರ್ನಿಗೂ ಮುನ್ನ ಗಂಭೀರವಾಗಿ ಗಾಯಗೊಂಡಿದ್ದ ನೋಕಿಯ, ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಬಳಗವನ್ನು ಕೂಡಿಕೊಂಡಿದ್ದರೂ ಸಹಾ, ಫಿಟ್ನೆಸ್ ಕಾರಣದಿಂದಾಗಿ ಆರಂಭಿಕ ಕೆಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. 

15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈಗಾಗಲೇ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಏಪ್ರಿಲ್ 02ರಂದು ನಡೆಯಲಿರುವ ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಕಣಕ್ಕಿಳಿಯಲಿದೆ.