ಆಕ್ಲೆಂಡ್‌[ಜ.09]: ಮುಂದಿನ ತಿಂಗಳು ಭಾರತ ವಿರುದ್ಧ ನಡೆಯಲಿರುವ ಸರಣಿಗೆ ನ್ಯೂಜಿಲೆಂಡ್‌ನ ತಾರಾ ಆಟಗಾರರಾದ ಟ್ರೆಂಟ್‌ ಬೌಲ್ಟ್‌ ಹಾಗೂ ಟಾಮ್‌ ಲಾಥಮ್‌ ಆಯ್ಕೆಯಾಗುವುದು ಅನುಮಾನವೆನಿಸಿದೆ. 

ಕಿವೀಸ್‌ ವಿರುದ್ಧ ಸರಣಿ ಗೆದ್ದ ಆಸ್ಪ್ರೇಲಿಯಾ

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿ ವೇಳೆ ಈ ಇಬ್ಬರು ಗಾಯಗೊಂಡಿದ್ದರು. ಬೌಲ್ಟ್‌ ಕೈ ಗಾಯಕ್ಕೆ ತುತ್ತಾಗಿದ್ದು, ಈ ವಾರಾಂತ್ಯದಲ್ಲಿ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಕೋಚ್‌ ಗ್ಯಾರಿ ಸ್ಟೆಡ್‌ ಹೇಳಿದ್ದಾರೆ.

ಇನ್ನು ಲಾಥಮ್ ಬಲಗೈನ ಬೆರಳು ಮುರಿದಿದ್ದು, ಕನಿಷ್ಠ 4 ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗಾಗಿ ಈ ಇಬ್ಬರು ಪ್ರಮುಖ ಆಟಗಾರರು ಭಾರತ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ.  ಆಸ್ಟ್ರೇಲಿಯಾ ತಂಡದೆದುರು ನ್ಯೂಜಿಲೆಂಡ್ ತಂಡವು 3-0 ಅಂತರದಲ್ಲಿ ಟೆಸ್ಟ್ ಸರಣಿ ಸೋತು ಮುಖಭಂಗ ಅನುಭವಿಸಿದೆ. ಇದೀಗ ಬಲಿಷ್ಠ ಭಾರತದೆದುರು ಈ ಇಬ್ಬರ ಅನುಪಸ್ಥಿತಿ ಕಿವೀಸ್ ತಂಡವನ್ನು ಕಾಡಲಿದೆ. 

ಜ.24ರಿಂದ ಭಾರತ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಬಳಿಕ 3 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳು ನಡೆಯಲಿವೆ.