ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ರಿಷಭ್ ಪಂತ್ಡಿಸೆಂಬರ್ 30ರಂದು ರಸ್ತೆ ಅಪಘಾತಕ್ಕೊಳಗಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ಸದ್ಯ ಡೆಹರಾಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್

ಡೆಹರಾಡೂನ್‌(ಜ.01): ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟರ್ ರಿಷಭ್ ಪಂತ್ ಕಳೆದ ಡಿಸೆಂಬರ್ 30ರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಮಹತ್ತರ ಬೆಳವಣಿಗೆಯೊಂದರಲ್ಲಿ ರಿಷಭ್ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶೀಘ್ರದಲ್ಲಿಯೇ ಡೆಹರಾಡೂನ್‌ನಿಂದ ಡೆಲ್ಲಿಗೆ ಏರ್‌ಲಿಫ್ಟ್‌ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಹೌದು, ರಿಷಭ್ ಪಂತ್ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸುತ್ತಿರುವ ಬಿಸಿಸಿಐ, ಇದೀಗ ಅವರು ಚೇತರಿಸಿಕೊಳ್ಳಲು ಹಾಗೂ ಪುನಶ್ಚೇತನಗೊಳ್ಳಲು ಅವರನ್ನು ಮುಂಬೈಗೆ ಶಿಫ್ಟ್ ಮಾಡುವುದಕ್ಕಿಂತ ಡೆಲ್ಲಿಗೆ ಸ್ಥಳಾಂತರಿಸುವುದೇ ಒಳ್ಳೆಯ ಆಯ್ಕೆ ಎನ್ನುವುದನ್ನು ಮನಗಂಡಿದೆ. ಹೀಗಾಗಿ ಬಿಸಿಸಿಐ, ಡೆಲ್ಲಿಯ ಪ್ರಖ್ಯಾತ ಆರ್ಥೋ(ಮೂಳೆ ತಜ್ಞ) ವೈದ್ಯರಾದ ದಿನ್‌ಶಾ ಪರಡಿವಾಲಾ ಅವರ ಬಳಿ ಚಿಕಿತ್ಸೆ ಕೊಡಿಸಲು ಮುಂದಾಗಿದೆ. ದೆಹಲಿಯ ಪ್ರಖ್ಯಾತ ಮೂಳೆ ತಜ್ಞರಾದ ಡಾ. ದಿನ್‌ಶಾ ಪರಡಿವಾಲಾ ಈಗಾಗಲೇ ಸಾಕಷ್ಟು ದಿಗ್ಗಜ ಕ್ರೀಡಾಪಟುಗಳಿಗೆ ಉತ್ತಮವಾದ ಚಿಕಿತ್ಸೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಡಾ. ದಿನ್‌ಶಾ ಪರಡಿವಾಲಾ ಆರ್ಥೋ ಹಾಗೂ ಕ್ರೀಡಾ ವೈದ್ಯರ ವಿಭಾಗದಲ್ಲಿ ಪ್ರಖ್ಯಾತಿ ಗಳಿಸಿಕೊಂಡಿದ್ದಾರೆ.

ಚಿನ್ನದ ಹುಡುಗ ನೀರಜ್ ಚೋಪ್ರಾಗೂ ಚಿಕಿತ್ಸೆ ನೀಡಿದ್ದ ಡಾ. ದಿನ್‌ಶಾ ಪರಡಿವಾಲಾ: 

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವಲ್ಲಿ ಡಾ. ದಿನ್‌ಶಾ ಪರಡಿವಾಲಾ ಪಾತ್ರವಿದ್ದಿದ್ದು ಬಹುತೇಕ ಮಂದಿಗೆ ಗೊತ್ತಿಲ್ಲ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯ ಪ್ರಖ್ಯಾತ ಆರ್ಥೋ ವೈದ್ಯರಾಗಿರು ಡಾ. ದಿನ್‌ಶಾ ಪರಡಿವಾಲಾ, ಚಿನ್ನದ ಹುಡುಗ ನೀರಜ್ ಚೋಪ್ರಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಿ ನೆರವಾಗಿದ್ದರು. 2019ರ ಮಧ್ಯಭಾಗದಲ್ಲಿ ನೀರಜ್ ಚೋಪ್ರಾ, ಮೊಣಕೈ ಗಾಯಕ್ಕೆ ತುತ್ತಾಗಿದ್ದರು. ಈ ಗಾಯದ ಸಮಸ್ಯೆ ನೀರಜ್ ಚೋಪ್ರಾ ಅವರ ವೃತ್ತಿ ಬದುಕಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿತ್ತು. ಆ ಸಂದರ್ಭದಲ್ಲಿ ಡಾ. ದಿನ್‌ಶಾ ಪರಡಿವಾಲಾ ಜಾವೆಲಿನ್ ಪಟು ನೀರಜ್ ಚೋಪ್ರಾಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವ ಮೂಲಕ ಗಾಯದಿಂದ ಚೇತರಿಸಿಕೊಳ್ಳುವಂತೆ ಮಾಡಿದ್ದರು. ಇದಾದ ಒಂದೂವರೆ ವರ್ಷದಲ್ಲೇ ನೀರಜ್ ಚೋಪ್ರಾ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ, ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನ್ನುವ ಹಿರಿಮೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದರು.

ಡಾ. ದಿನ್‌ಶಾ ಪರಡಿವಾಲಾ, ಕೇವಲ ನೀರಜ್ ಚೋಪ್ರಾ ಮಾತ್ರವಲ್ಲದೇ, ಮತ್ತೋರ್ವ ಒಲಿಂಪಿಕ್ಸ್‌ ಪದಕ ವಿಜೇತೆ ಸೈನಾ ನೆಹ್ವಾಲ್, ಪೋಗಟ್ ಸಹೋದರಿಯರಿಗೆ, ಪಾರುಪಳ್ಳಿ ಕಶ್ಯಪ್, ಸುಶಿಲ್ ಕುಮಾರ್, ಯೋಗೇಶ್ವರ್ ದತ್, ಬಾಕ್ಸಿಂಗ್ ಪಟು ವಿಕಾಸ್ ಕೃಷ್ಣನ್, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ದೇಶದ ತಾರಾ ಕ್ರಿಕೆಟಿಗರು ಹಾಗೂ ಕಬಡ್ಡಿ ಪಟುಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಚೇತರಿಕೆ: ರಿಷಭ್‌ ಪಂತ್‌ ಖಾಸಗಿ ವಾರ್ಡ್‌ಗೆ ಶಿಫ್ಟ್‌

ಡೆಹರಾಡೂನ್‌: ಕಳೆದ ವಾರ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತದ ವಿಕೆಟ್‌ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರನ್ನು ಐಸಿಯುಯಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಡೆಹರಾಡೂನ್‌ನ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಾಗಿರುವ ಪಂತ್‌ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕಾಲಿನ ಭಾಗದಲ್ಲಿ ನೋವು ಇದ್ದರೂ ಸೋಂಕು ಹರಡುವ ಭೀತಿಯಿಂದ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಎಂಎಆರ್‌ಐ ಸ್ಕ್ಯಾನ್‌ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಪ್ರೈವೇಟ್‌ ವಾರ್ಡ್‌ಗೆ ಶಿಫ್ಟ್‌..!

ಡಿ.30ರಂದು ಮುಂಜಾನೆ ಪಂತ್‌ ಚಲಾಯಿಸುತ್ತಿದ್ದ ಕಾರು ದೆಹಲಿ-ಡೆಹರಾಡೂನ್‌ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು. ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ಮುನ್ನವೇ ಹೊರಬಂದಿದ್ದರಿಂದ ಪಂತ್‌ ಪ್ರಾಣಾಪಾಯದಿಂದ ಪಾರಾಗಿದ್ದರು.