* ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅಬ್ಬರಿಸಿದ ಶೆಫಾಲಿ ವರ್ಮಾ* ಶೆಫಾಲಿ-ಮಂಧನಾ ಜೋಡಿಯಿಂದ ಶತಕದ ಜತೆಯಾಟ* ಇಂಗ್ಲೆಂಡ್ ಎದುರು ಕೇವಲ 16 ರನ್‌ ಅಂತರದಲ್ಲಿ 5 ವಿಕೆಟ್ ಕಳೆದಕೊಂಡ ಮಿಥಾಲಿ ಪಡೆ 

ಬ್ರಿಸ್ಟಾಲ್‌(ಜೂ.13): ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಯುವ ಬ್ಯಾಟರ್‌ ಶೆಫಾಲಿ ವರ್ಮಾ(96) ಶತಕವಂಚಿತ ಬ್ಯಾಟಿಂಗ್ ಹಾಗೂ ಮತ್ತೋರ್ವ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ(78) ಆಕರ್ಷಕ ಅರ್ಧಶತಕದ ಹೊರತಾಗಿಯೂ ಭಾರತ ಮಹಿಳಾ ತಂಡವು ಎದರು ಇಂಗ್ಲೆಂಡ್ ಎದುರು ನಾಟಕೀಯ ಕುಸಿತ ಕಂಡಿದೆ. ಎರಡನೇ ದಿನದಾಟದಂತ್ಯಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡವು 5 ವಿಕೆಟ್ ಕಳೆದುಕೊಂಡು 187 ರನ್‌ ಬಾರಿಸಿದ್ದು, ಇನ್ನೂ 209 ರನ್‌ಗಳ ಹಿನ್ನೆಡೆಯಲ್ಲಿದೆ.

ಇಂಗ್ಲೆಂಡ್ ಮಹಿಳಾ ತಂಡವು 9 ವಿಕೆಟ್ ಕಳೆದುಕೊಂಡು 396 ರನ್‌ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತ ಪರ ಸ್ನೆಹ್ ರಾಣಾ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 3 ಹಾಗೂ ಪೂಜಾ ವಸ್ತ್ರಾಕರ್ ಮತ್ತು ಜೂಲನ್ ಗೋಸ್ವಾಮಿ ತಲಾ ಒಂದೊಂದು ವಿಕೆಟ್ ಪಡೆದರು. 

Scroll to load tweet…

ಮಹಿಳಾ ಟೆಸ್ಟ್‌: ಭಾರತ ಎದುರು ಇಂಗ್ಲೆಂಡ್ ಮೇಲುಗೈ

ಇನ್ನು ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಆರಂಭಿಕ ಜೋಡಿ ಸ್ಮೃತಿ ಮಂಧನಾ ಹಾಗೂ ಶೆಫಾಲಿ ವರ್ಮಾ ಭರ್ಜರಿ ಆರಂಭ ಒದಗಿಸಿಕೊಟ್ಟರು. ಕೇವಲ 17 ವರ್ಷದ ಬ್ಯಾಟರ್ ಶೆಫಾಲಿ ವರ್ಮಾ ತಮ್ಮ ನಿರ್ಭೀತಿಯ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ಗಮನ ಸೆಳೆದರು. ಶೆಫಾಲಿ ಹಾಗೂ ಮಂಧನಾ ಜೋಡಿ ಮೊದಲ ವಿಕೆಟ್‌ಗೆ 167 ರನ್‌ಗಳ ಜತೆಯಾಟವಾಡಿದರು. ಶೆಫಾಲಿ 152 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 96 ರನ್ ಬಾರಿಸಿ, ಕೇವಲ 4 ರನ್ ಅಂತರದಲ್ಲಿ ಚೊಚ್ಚಲ ಟೆಸ್ಟ್ ಶತಕದಿಂದ ವಂಚಿತರಾದರು. ಇನ್ನು ಮತ್ತೊಂದು ತುದಿಯಲ್ಲಿ ಶೆಫಾಲಿಗೆ ಉತ್ತಮ ಸಾಥ್ ನೀಡಿದ ಮಂಧನಾ 155 ಎಸೆತಗಳನ್ನು ಎದುರಿಸಿ 14 ಬೌಂಡರಿ ಸಹಿತ 78 ರನ್‌ ಬಾರಿಸಿ ಸ್ಕೀವಿಯರ್‌ಗೆ ವಿಕೆಟ್ ಒಪ್ಪಿಸಿದರು.

Scroll to load tweet…

ಭಾರತ ತಂಡದ ನಾಟಕೀಯ ಕುಸಿತ: ಒಂದು ಹಂತದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 167 ರನ್‌ ಬಾರಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು ಬಳಿಕ 183 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ನಾಟಕೀಯ ಕುಸಿತ ಕಂಡಿತು. ಕೇವಲ 16 ರನ್‌ಗಳ ಅಂತರದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು 5 ವಿಕೆಟ್ ಕಳೆದುಕೊಂಡಿತು. ಶಫಾಲಿ ವಿಕೆಟ್ ಪತನದ ಬೆನ್ನಲ್ಲೇ ಮಂಧನಾ ಕೂಡಾ ಪೆವಿಲಿಯನ್ ಸೇರಿದರು. ಇದಾದ ಬಳಿಕ ಶಿಖಾ ಪಾಂಡೆ(೦), ನಾಯಕಿ ಮಿಥಾಲಿ ರಾಜ್(2) ಹಾಗೂ ಪೂನಂ ರಾವತ್(2) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. 

ಸದ್ಯ ಹರ್ಮನ್‌ಪ್ರೀತ್ ಕೌರ್(4) ಹಾಗೂ ದೀಪ್ತಿ ಶರ್ಮಾ(೦) ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು, ಈ ಜೋಡಿಯ ಮೇಲೆ ಮಿಥಾಲಿ ಪಡೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ.