ಟೀಂ ಇಂಡಿಯಾ ವಿರುದ್ಧ 3ನೇ ಏಕದಿನ ಪಂದ್ಯ ಗೆದ್ದ ಶ್ರೀಲಂಕಾ ಆರಂಭಿಕ 2 ಪಂದ್ಯ ಸೋತು ಸರಣಿ ಕೈಚೆಲ್ಲಿದ್ದ ಶ್ರೀಲಂಕಾ ಭಾರತದ ಬ್ಯಾಟಿಂಗ್‌ಗೆ ಅಡ್ಡಿಯಾಗಿತ್ತು ಮಳೆ
ಕೊಲೊಂಬೊ(ಜು.23): ಟೀಂ ಇಂಡಿಯಾ ವಿರುದ್ಧ ಆರಂಭಿಕ 2 ಪಂದ್ಯ ಸೋತು ಸರಣಿ ಕೈಚೆಲ್ಲಿದ ಶ್ರೀಲಂಕ ಇದೀಗ ಅಂತಿಮ ಪಂದ್ಯ ಗೆದ್ದು ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 3 ವಿಕೆಟ್ ಗೆಲುವು ಕಂಡಿದೆ. ಈ ಮೂಲಕ ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ 2-1 ಅಂತರದಲ್ಲಿ ಶಿಖರ್ ಧವನ್ ಸೈನ್ಯದ ಪಾಲಾಗಿದೆ.
ಅಂತಿಮ ಪಂದ್ಯಕ್ಕೆ ಟೀಂ ಇಂಡಿಯಾ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿತ್ತು. ಆದರೆ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ಜೊತೆಗೆ ಮಳೆ ಕೂಡ ಅಡ್ಡಿಯಾಯಿತು. ಪರಿಣಾಮ ಶ್ರೀಲಂಕಾ ತಂಡಕ್ಕೆ 47 ಓವರ್‌ಗಳಲ್ಲಿ 227 ರನ್ ಟಾರ್ಗೆಟ್ ನೀಡಲಾಯಿತು.
ಸುಲಭ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಕನ್ನಡಿಗ ಕೆ ಗೌತಮ್ ಶಾಕ್ ನೀಡಿದರು. 7 ರನ್ ಸಿಡಿಸಿದ ಮಿನೋದ್ ಬಾನುಕಾ ವಿಕೆಟ್ ಕಬಳಿಸಿ ಟೀಂ ಇಂಡಿಯಾಗೆ ಮುನ್ನಡೆ ತಂದುಕೊಟ್ಟರು. ಆದರೆ ಅವಿಷ್ಕಾ ಫರ್ನಾಂಡೋ ಹಾಗೂ ಭಾನುಕಾ ರಾಜಪಕ್ಸ ಜೊತೆಯಾಟ ಟೀಂ ಇಂಡಿಯಾದ ಲೆಕ್ಕಾಚಾರ ತಲೆಕೆಳಗೆ ಮಾಡಿತು.
ಬಾನುಕ ರಾಜಪಕ್ಸೆ 65 ರನ್ ಕಾಣಿಕೆ ನೀಡಿದರು. ಭಾನುಕ ವಿಕೆಟ್ ಪತನದ ಬೆನ್ನಲ್ಲೇ ಧನಂಜ ಡಿಸಿಲ್ವ ವಿಕೆಟ್ ಪತನಗೊಂಡಿತು. ಆದರೆ ಶ್ರೀಲಂಕಾ ತಂಡ ಒತ್ತಡಕ್ಕೆ ಸಿಲುಕಲಿಲ್ಲ. ಫರ್ನಾಂಡೋ ಹಾಗೂ ಚಾರಿತ್ ಅಸಲಂಕ ಬ್ಯಾಟಿಂಗ್ ಲಂಕಾ ತಂಡಕ್ಕೆ ನೆರವಾಯಿತು.
ಚಾರಿತ್ 24 ರನ್ ಸಿಡಿಸಿ ಔಟಾದರು. ನಾಯಕ ದಸೂನ್ ಶನಕ ಅಬ್ಬರಿಸಲಿಲ್ಲ. ಆದರೆ ಫರ್ನಾಂಡೋ ದಿಟ್ಟ ಹೋರಾಟ ನೀಡಿದರು. ಫರ್ನಾಂಡೋ 76 ರನ್ ಸಿಡಿಸಿ ಔಟಾದರು. ಫರ್ನಾಂಡೋ ವಿಕೆಟ್ ಪತನ ಲಂಕಾ ತಂಡದಲ್ಲಿ ಆತಂಕ ತಂದಿತು. ರಮೇಶ್ ಮೆಂಡಿಸ್ ಹಾಗೂ ಅಕಿಲಾ ಧನಂಜಯ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ 39 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
