ದುಬೈ(ಮಾ.24): ಭಾರತದ ಯುವ ಬ್ಯಾಟಿಂಗ್‌ ತಾರೆ ಶಫಾಲಿ ವರ್ಮಾ ಐಸಿಸಿ ಮಹಿಳಾ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. 

ಕಳೆದ ವರ್ಷ ಆಸ್ಪ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತ ನಾಕೌಟ್‌ ಹಂತಕ್ಕೇರಲು ನೆರವಾಗಿ, ಅಗ್ರಸ್ಥಾನಕ್ಕೇರಿದ್ದ ಶಫಾಲಿ ಸದ್ಯ ಆಸ್ಪ್ರೇಲಿಯಾದ ಬೆಥ್‌ ಮೂನಿ ಅವರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದಾರೆ. 2020ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್ ನೇತೃತ್ವದ ಭಾರತ ತಂಡ ಫೈನಲ್‌ ಪ್ರವೇಶಿಸುವಲ್ಲಿ ಶಫಾಲಿ ವರ್ಮಾ ಮಹತ್ವದ ಪಾತ್ರ ವಹಿಸಿದ್ದರು.

ವೈಟ್‌ವಾಶ್‌ ಮುಖಭಂಗ ತಪ್ಪಿಸಿಕೊಂಡ ಭಾರತ

ದ.ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಶಫಾಲಿ ಕ್ರಮವಾಗಿ 23,47 ಹಾಗೂ 60 ರನ್‌ ಗಳಿಸಿದ್ದರು. ಮೊದಲೆರಡು ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿದ್ದ ಭಾರತ ತಂಡ ಮೂರನೇ ಟಿ20 ಪಂದ್ಯ 9 ವಿಕೆಟ್‌ಗಳ ಅಂತರದ ಜಯ ದಾಖಲಿಸುವ ಮೂಲಕ ವೈಟ್‌ವಾಶ್‌ ಮುಖಭಂಗದಿಂದ ಪಾರಾಗಿದೆ.

ಇನ್ನು ಕರ್ನಾಟಕದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್‌ ತಮ್ಮ ಅದ್ಭುತ ಬೌಲಿಂಗ್‌ ಪ್ರದರ್ಶನದಿಂದಾಗಿ 34ನೇ ಸ್ಥಾನದಿಂದ 25ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.