* ಭಾರತ- ಇಂಗ್ಲೆಂಡ್ ಏಕೈಕ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭ* ಸತತ 4ನೇ ಟೆಸ್ಟ್ ಪಂದ್ಯದ ಗೆಲುವಿನ ಮೇಲೆ ಕಣ್ಣಿಟ್ಟಿದೆ ಮಿಥಾಲಿ ಪಡೆ* 2014ರಲ್ಲಿ ಮೈಸೂರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿತ್ತು.

ಬ್ರಿಸ್ಟಲ್(ಜೂ.16)‌: ಭಾರತ ಮಹಿಳಾ ಕ್ರಿಕೆಟ್‌ ತಂಡ 7 ವರ್ಷಗಳ ಬಳಿಕ ಟೆಸ್ಟ್‌ ಪಂದ್ಯವನ್ನಾಡಲು ಸಜ್ಜಾಗಿದೆ. ಬುಧವಾರದಿಂದ ಇಲ್ಲಿ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ರಾಜ್‌ ಪಡೆ ಕಣಕ್ಕಿಳಿಯಲಿದ್ದು, ಗೆಲುವಿನ ವಿಶ್ವಾಸದಲ್ಲಿದೆ. 

2014ರಲ್ಲಿ ಮೈಸೂರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ ಕೊನೆಯ ಟೆಸ್ಟ್‌ ಕ್ರಿಕೆಟ್ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಭಾರತ ಗೆದ್ದರೆ, ಸತತ 4 ಟೆಸ್ಟ್‌ಗಳನ್ನು ಗೆದ್ದ ಮೊದಲ ತಂಡ ಎನ್ನುವ ವಿಶ್ವ ದಾಖಲೆ ಬರೆಯಲಿದೆ. ಆಸ್ಪ್ರೇಲಿಯಾ ತಂಡ 3 ಬಾರಿ ಸತತ 3 ಪಂದ್ಯಗಳನ್ನು ಗೆದ್ದಿದೆ. ಭಾರತ ಸಹ ಸತತ 3 ಪಂದ್ಯಗಳಲ್ಲಿ ಜಯಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿಗೂ ಮೊದಲು ಇಂಗ್ಲೆಂಡ್‌ ವಿರುದ್ಧ 2 ಟೆಸ್ಟ್‌ಗಳನ್ನು ಭಾರತ ಗೆದ್ದಿತ್ತು.

ಆಸೀಸ್‌ ಪ್ರವಾಸದಲ್ಲಿ ಏಕೈಕ ಟೆಸ್ಟ್ ಪಂದ್ಯವಾಡಲಿದೆ ಭಾರತ ತಂಡ

ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಒಟ್ಟು 13 ಟೆಸ್ಟ್‌ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ ವನಿತೆಯರ ತಂಡ ಕೊಂಚ ಮೇಲುಗೈ ಸಾಧಿಸಿದೆ. 13 ಟೆಸ್ಟ್ ಪಂದ್ಯಗಳ ಪೈಕಿ ಭಾರತ 2 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದ್ದರೆ, ಇಂಗ್ಲೆಂಡ್ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ರುಚಿ ಸವಿದಿದೆ. ಇನ್ನು 10 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.