ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ
* ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ
* ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿ ನಿಂತಿದೆ ಭಾರತ ಮಹಿಳಾ ತಂಡ
* ಇಂಗ್ಲೆಂಡ್ ವಿರುದ್ದ ಮೂರು ಮಾದರಿಯ ಕ್ರಿಕೆಟ್ ಪಂದ್ಯಗಳನ್ನಾಡಲಿರುವ ಭಾರತ ತಂಡ
ಮುಂಬೈ(ಮೇ.28): ಇಂಗ್ಲೆಂಡ್ ಪ್ರವಾಸಕ್ಕೆ ಹೊರಟು ನಿಂತಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ.
ಸದ್ಯ ಭಾರತ ಮಹಿಳಾ ಕ್ರಿಕೆಟ್ ತಂಡವು ಮುಂಬೈನಲ್ಲಿ ಕ್ವಾರಂಟೈನ್‌ನಲ್ಲಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ ಏಕೈಕ ಟೆಸ್ಟ್ ಹಾಗೂ 2 ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇಂಗ್ಲೆಂಡ್ ವಿರುದ್ದ ಜೂನ್ 16ರಿಂದ ಏಕೈಕ ಟೆಸ್ಟ್ ಪಂದ್ಯವನ್ನಾಡಿದರೆ, ಜೂನ್ 27ರಿಂದ ಏಕದಿನ ಸರಣಿಯನ್ನಾಡಲಿದೆ. ಇನ್ನು ಜುಲೈ 09 ಹಾಗೂ 11ರಂದು 2 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ.
ಭಾರತ ಕ್ರಿಕೆಟ್ ತಂಡದ ಎಲ್ಲಾ ಮಹಿಳಾ ಆಟಗಾರ್ತಿಯರು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಬಹುತೇಕ ಎಲ್ಲರೂ ತಮ್ಮ ತಮ್ಮ ನಗರಗಳಲ್ಲೇ ಲಸಿಕೆ ಪಡೆದಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಜಗತ್ತಿನ ಅತಿಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟ್ ಕ್ಯಾಪ್ಟನ್‌ಗಳಿವರು..!
ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ದೀಪ್ತಿ ಶರ್ಮಾ ತಾವು ಮೊದಲ ಡೋಸ್ ಲಸಿಕೆ ಪಡೆದಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ನಾನು ಇಂಜೆಕ್ಷನ್ ಸೂಜಿಗೆ ಸ್ವಲ್ಪ ಹೆದರಿದ್ದೆ. ಹೀಗಿದ್ದೂ ನಾನಿಂದು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದೆ. ಎಲ್ಲರೂ ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ, ಎಲ್ಲಾ ಆಟಗಾರ್ತಿಯರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಇನ್ನು ಎರಡನೇ ಡೋಸ್ ಲಸಿಕೆಯನ್ನು ಇಂಗ್ಲೆಂಡ್ ಆರೋಗ್ಯ ಇಲಾಖೆಯಿಂದ ಒದಗಿಸುವ ಲಸಿಕೆಯನ್ನು ಪಡೆಯಲಿದ್ದಾರೆ ಎಂದು ತಿಳಿಸಿವೆ. ಭಾರತ ಮಹಿಳಾ ಕ್ರಿಕೆಟ್ ತಂಡವು ವಿಶೇಷ ವಿಮಾನದ ಮೂಲಕ ಮುಂಬೈನಿಂದ ಜೂನ್ 02ರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿವೆ.
ಈಗಾಗಲೇ ಟೀಂ ಇಂಡಿಯಾ ಕ್ರಿಕೆಟಿಗರಾದ ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಹಾಗೂ ರಿಷಭ್ ಪಂತ್ ತಮ್ಮ ತವರಿನಲ್ಲಿ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಎಲ್ಲಾ ಆಟಗಾರರು ಇಂಗ್ಲೆಂಡ್‌ನಲ್ಲಿ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ಆರಂಭವಾಗಲಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"