L ಶಿವರಾಮಕೃಷ್ಣ BCCI ನೂತನ ಆಯ್ಕೆಗಾರ?
ಲಕ್ಷ್ಮಣ್ ಶಿವರಾಮಕೃಷ್ಣನ್ ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಎಂ.ಎಸ್.ಕೆ ಪ್ರಸಾದ್ ಅವಧಿ ಮುಕ್ತಾಯವಾಗಲಿದ್ದು, ಮಾಜಿ ಸ್ಪಿನ್ನರ್ ಆಯ್ಕೆ ಸಮಿತಿ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ನವದೆಹಲಿ(ನ.21): ಬಿಸಿಸಿಐ ಪ್ರಧಾನ ಆಯ್ಕೆಗಾರ ಎಂ.ಎಸ್.ಕೆ.ಪ್ರಸಾದ್ ಪಾಲಿಗೆ ಗುರುವಾರ ನಡೆಯಲಿರುವ ಆಯ್ಕೆ ಸಮಿತಿ ಸಭೆ ಕೊನೆ ಸಭೆ ಆಗಲಿದೆ. ಈ ವರ್ಷಾಂತ್ಯಕ್ಕೆ ಅವರ ಕಾರ್ಯಾವಧಿ ಮುಕ್ತಾಯಗೊಳ್ಳಲಿದೆ.
ವಿಂಡೀಸ್ ವಿರುದ್ಧದ ಸರಣಿ ಈ ವರ್ಷ ಭಾರತ ತಂಡದ ಆಡಲಿರುವ ಕೊನೆ ಸರಣಿ ಆಗಿರುವ ಕಾರಣ, ಪ್ರಸಾದ್ ಆಯ್ಕೆ ಮಾಡಲಿರುವ ಕೊನೆ ತಂಡ ಇದಾಗಲಿದೆ. ಅವರ ಸ್ಥಾನಕ್ಕೆ ಮಾಜಿ ಸ್ಪಿನ್ನರ್ ಎಲ್.ಶಿವರಾಮಕೃಷ್ಣನ್ ನೇಮಕಗೊಳ್ಳುವ ಸಾಧ್ಯತೆ ಇದೆ. ಡಿ.1ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಿವರಾಮಕೃಷ್ಣನ್ ಅವರ ಹೆಸರು ಅಧಿಕೃತಗೊಳ್ಳಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಶಿವರಾಮಕೃಷ್ಣನ್ ಮಂದಿನ ಆಯ್ಕೆ ಸಮಿತಿ ಮುಖ್ಯಸ್ಥ; MSKಗೆ ಕೊಕ್?
ಆಯ್ಕೆ ಸಮಿತಿಯ ಎಲ್ಲಾ ಸದಸ್ಯರನ್ನು ಕೈಬಿಟ್ಟು ಬಿಸಿಸಿಐ ಹೊಸದಾಗಿ ಸಮಿತಿ ರಚಿಸಲಿದೆ ಎನ್ನಲಾಗಿತ್ತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಶಿವರಾಮಕೃಷ್ಣನ್ ಜತೆ ಜ್ಞಾನೇಂದ್ರ ಪಾಂಡೆ ಆಯ್ಕೆ ಸಮಿತಿಗೆ ಸೇರಲಿದ್ದು, ಸದ್ಯ ಸಮಿತಿಯ ಸದಸ್ಯರಾಗಿರುವ ಜತಿನ್ ಪರಂಜಪೆ, ದೇವಾಂಗ್ ಗಾಂಧಿ ಹಾಗೂ ಶರಣ್‌ದೀಪ್ ಸಿಂಗ್ ಮುಂದಿನ ವರ್ಷದ ವರೆಗೂ ಮುಂದುವರಿಯಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!
ಲಕ್ಷ್ಮಣ್ ಶಿವರಾಮಕೃಷ್ಣನ್ ಹಲವು ವರ್ಷಗಳಿಂದ ದೇಸಿ ಟೂರ್ನಿಗಳಲ್ಲೂ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಪ್ರತಿಭಾವಂತ ಆಟಗಾರರ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಲಿದ್ದಾರೆ ಎನ್ನುವುದು ಅವರ ಆಯ್ಕೆ ಹಿಂದಿರುವ ಪ್ರಮುಖ ಕಾರಣ ಎನ್ನಲಾಗಿದೆ.
ಬಿಸಿಸಿಐ ವಾರ್ಷಿಕ ಸಭೆ ವೇಳೆ ಆಯ್ಕೆ ಸಮಿತಿ ಸದಸ್ಯರ ವೇತನ ಹೆಚ್ಚಳದ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಪ್ರಧಾನ ಆಯ್ಕೆಗಾರರಿಗೆ ವಾರ್ಷಿಕ 1.5 ಕೋಟಿಯಿಂದ 2 ಕೋಟಿ ರುಪಾಯಿ, ಸದಸ್ಯರಿಗೆ 1.25 ಕೋಟಿ ರುಪಾಯಿ ವೇತನ ನಿಗದಿಯಾಗಬಹುದು ಎಂದು ಹೇಳಲಾಗಿದೆ.