ಬೆಂಗಳೂರು(ಜು.07): ಮೂರು ಐಸಿಸಿ ಟ್ರೋಫಿ ಗೆದ್ದ ಜಗತ್ತಿನ ಏಕೈಕ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜಗತ್ತಿನಾದ್ಯಂತ ಅಪಾಯ ಅಭಿಮಾನಿಗಳನ್ನು ಹೊಂದಿರುವ 'ಮಹಿ'ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಭಾರತ ಕ್ರಿಕೆಟ್ ಕಂಡ ಚಾಣಾಕ್ಷ ವಿಕೆಟ್ ಕೀಪರ್‌, ಗ್ರೇಟ್ ಫಿನೀಷರ್ ಹಾಗೆಯೇ ಪ್ರಚಂಡ ನಾಯಕ ಎನ್ನುವ ಹೆಗ್ಗಳಿಕೆ ಧೋನಿ ಬೆನ್ನಿಗಿದೆ. 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ಐಸಿಸಿಯ 3 ಟ್ರೋಫಿ ಗೆದ್ದ ಏಕೈಕ ನಾಯಕನೆಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಈ ದಾಖಲೆ ಇಂದಿಗೂ ಧೋನಿ ಹೆಸರಿನಲ್ಲಿಯೇ ಇದೆ. ಇದಕ್ಕೂ ಮೊದಲು ಧೋನಿ 2007ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಧೋನಿ, 2007ರಲ್ಲಿ ತಂಡದ ನಾಯಕರಾಗಿ ಆಯ್ಕೆಯಾದರು. ಆ ಬಳಿಕ ಧೋನಿ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಯಿತು. ಯುವ ತಂಡವನ್ನು ಕಟ್ಟಿಕೊಂಡು ಟಿ20 ವಿಶ್ವಕಪ್ ಗೆಲ್ಲಿಸಿದ ಧೋನಿ, 2009ರಲ್ಲಿ ಟೀಂ ಇಂಡಿಯಾವನ್ನು ಮೊದಲ ಬಾರಿಗೆ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು. 2010ರಲ್ಲಿ ಏಷ್ಯಾಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2016ರಲ್ಲಿ ಮತ್ತೆ ಏಷ್ಯಾಕಪ್ ಜಯಿಸಿಕೊಟ್ಟರು.

ಧೋನಿ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತ ಸರ್ಕಾರ ಮಹಿಗೆ ರಾಜೀವ್ ಗಾಂಧಿ ಖೇಲ್ ರತ್ನ(2007) ನೀಡಿ ಗೌರವಿಸಿದೆ. 2008ರಲ್ಲಿ ಪದ್ಮಶ್ರೀ ಹಾಗೂ 2018ರಲ್ಲಿ ಪದ್ಮಭೂಷಣ್ ಪ್ರಶಸ್ತಿಗೂ ಧೋನಿ ಭಾಜನರಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಾನಾಡಿದ ಎಲ್ಲಾ ಆವೃತ್ತಿಗಳಲ್ಲೂ ಸ್ಥಿರ ಪ್ರದರ್ಶನ ತೋರಿದ್ದು, ಮೂರು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಧೋನಿ ಇದುವರೆಗೂ 90 ಟೆಸ್ಟ್ 350 ಏಕದಿನ ಹಾಗೂ 98 ಟಿ20 ಪಂದ್ಯಗಳನ್ನಾಡಿದ್ದು ಕ್ರಮವಾಗಿ 4876, 10773 ಹಾಗೂ 1617 ರನ್ ಬಾರಿಸಿದ್ದಾರೆ. ಇಷ್ಟೆಲ್ಲಾ ಹೇಳಿದ ಮೇಲೆ ಧೋನಿ ವಿಕೆಟ್ ಕೀಪಿಂಗ್ ವಿಚಾರವನ್ನು ಹೇಳದೇ ಹೋದರೆ ಅಪೂರ್ಣವಾದೀತು. ಧೋನಿ ವಿಕೆಟ್ ಹಿಂದೆ 634 ಕ್ಯಾಚ್ ಹಾಗೂ 195 ಸ್ಟಂಪಿಂಗ್ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 123 ಸ್ಟಂಪಿಂಗ್ ಮಾಡುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಧೋನಿ 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದು, ಸದ್ಯದಲ್ಲೇ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನುವುದು ಅವರ ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯಾಗಿದೆ. ಸುವರ್ಣ ನ್ಯೂಸ್.ಕಾಂ ವತಿಯಿಂದ Wish U Happy Birthday Mahi....