ಮುಂಬೈ(ಏ.23): ಲಾಕ್‌ಡೌನ್‌ನಿಂದಾಗಿ ಕ್ರಿಕೆಟಿಗರು ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದು, 7 ವರ್ಷದ ಹರಾರ‍ಯಣ ಮೂಲದ ಬಾಲಕಿಯ ಕ್ರಿಕೆಟ್‌ ವಿಡಿಯೋ ಎಲ್ಲರ ಗಮನ ಸೆಳೆದಿದೆ. 

ಪರಿ ಶರ್ಮಾ ಎನ್ನುವ ಬಾಲಕಿಯ ಬ್ಯಾಟಿಂಗ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರು ಮನ ಸೋತಿದ್ದಾರೆ. ವಿಂಡೀಸ್‌ ಬ್ಯಾಟ್ಸ್‌ಮನ್‌ ಶಾಯ್‌ ಹೋಪ್‌ ‘ನಾನು ದೊಡ್ಡವನಾದ ಮೇಲೆ ಪರಿ ಶರ್ಮಾ ಥರ ಆಗಬೇಕು’ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಸೇರಿದಂತೆ ಇನ್ನೂ ಅನೇಕ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪರಿ ಶರ್ಮಾ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಆಕೆ ಬ್ಯಾಟಿಂಗ್ ಮಾಡುತ್ತಿರುವ ಹಲವು ವಿಡಿಯೋಗಳಿವೆ. ಇದೀಗ ಪರಿ ಶರ್ಮಾ ಇಂಟರ್‌ನೆಟ್ ಸ್ಟಾರ್ ಆಗಿ ಹೊರಹೊಮ್ಮಿದ್ದಾಳೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ಮೊದಲು ಬಾರಿಗೆ ಪರಿಯ ವಿಡಿಯೋ ಶೇರ್ ಮಾಡಿತ್ತು. ಈ ವಿಡಿಯೋವನ್ನು 4.7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದರನ್ನು ಶಾಯ್ ಹೋಮ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ಒಂದುವರೆ ಸಾವಿರಕ್ಕೂ ಅಧಿಕ ರೀಟ್ವೀಟ್ ಹಾಗೂ 13 ಸಾವಿರಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ.

ಫ್ಲಿಂಟಾಫ್‌ 'ಹೀಗನ್ನದಿದ್ದರೆ' ಬಹುಶಃ ಯುವಿ 6 ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ..?

ಇನ್ನು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸುನಿಲ್ ಜೋಶಿ ಕೂಡಾ ಪರಿ ಶರ್ಮಾ ವಿಡಿಯೋ ಶೇರ್ ಮಾಡಿಕೊಂಡಿದ್ದು, ಏಳು ವರ್ಷದ ಕ್ರಿಕೆಟರ್. ಕಳೆದ ಕೆಲವು ತಿಂಗಳಲ್ಲಿ ನಾನು ನೋಡಿದ ಸೊಗಸಾದ ವಿಡಿಯೋವಿದು. ಬಿಸಿಸಿಐ ಈ ಪುಟ್ಟ ಹುಡುಗಿಯನ್ನು ಗಮನಿಸೋಣ. ಒಳ್ಳೆಯದಾಗಲಿ ಪರಿ ಎಂದು ಶುಭ ಹಾರೈಸಿದ್ದಾರೆ.

ಒಟ್ಟಿನಲ್ಲಿ ರೋಹ್ಟಕ್‌ನ ಏಳು ವರ್ಷದ ಬಾಲೆ ಇದೀಗ ಸಾಮಾಜಿಕ ತಾಣಗಳಲ್ಲಿ ಹೊಸ ಸಂಚಲನವನ್ನು ಹುಟ್ಟುಹಾಕಿದ್ದಾಳೆ. ಆಕೆಯ ಬ್ಯಾಟಿಂಗ್ ವಿಡಿಯೋ ವೈರಲ್‌ ಆಗಿದೆ.