INDvAUS 3ನೇ ಟಿ20: ತಾಂತ್ರಿಕ ಕಾರಣದಿಂದ ಭಾರತಕ್ಕೆ ಆಯ್ತಾ ಹಿನ್ನೆಡೆ? ಕೊಹ್ಲಿ ಅಸಮಾಧಾನ!
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಭಾರತದ ಪಾಲಾಗಿದೆ. ಆದರೆ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಭಾರತದ ಸೋಲಿಗೆ ತಾಂತ್ರಿಕ ಸಮಸ್ಯೆ ಕಾರಣವಾಯ್ತಾ? ಹೀಗೋಂದು ಚರ್ಚೆ ಶುರುವಾಗಿದೆ. ಇದೇ ಕಾರಣಕ್ಕೆ ಮೈದಾನದಲ್ಲಿ ಕೊಹ್ಲಿ ಕೂಡ ಅಸಮಾಧಾನರಾಗಿದ್ದರು. ಹಾಗಾದ್ರೆ ಭಾರತದ ಸೋಲಿಗೆ ಹಾಗೂ ಕೊಹ್ಲಿ ಅಸಮಾಧಾನಕ್ಕೆ ಕಾರಣವಾದ ಆ ತಾಂತ್ರಿಕ ಸಮಸ್ಯೆ ಏನು? ಇಲ್ಲಿದೆ ವಿವರ.
ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 12 ರನ್ ಸೋಲು ಕಂಡಿದೆ. ಈ ಮೂಲಕ ಕ್ಲೀನ್ ಸ್ವೀಪ್ ಗೆಲುವು ಕನಸು ಭಗ್ನಗೊಂಡರೂ, ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ.
ಆಸ್ಟ್ರೇಲಿಯಾ ನೀಡಿದ 187 ರನ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾ 174 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಆಸೀಸ್ ಬೃಹತ್ ಮೊತ್ತದಲ್ಲಿ ಮ್ಯಾಥ್ಯೂ ವೇಡ್ 80 ರನ್ ಸಿಡಿಸೋ ಮೂಲಕ ಪ್ರಮುಖ ಕೊಡುಗೆ ನೀಡಿದ್ದಾರೆ.
ಆಸೀಸ್ ಬ್ಯಾಟಿಂಗ್ ವೇಳೆ 11ನೇ ಓವರ್‌ನಲ್ಲಿ ಟಿ ನಟರಾಜನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದಿದ್ದರು. ಟೀಂ ಇಂಡಿಯಾ ಔಟ್‌ಗೆ ಮನವಿ ಮಾಡಿದ್ದರೂ ಅಂಪೈರ್ ನಿರಾಕರಿಸಿದರು.
ನಾಯಕ ವಿರಾಟ್ ಕೊಹ್ಲಿ ಕೀಪರ್ ಕೆಲ್ ರಾಹುಲ್ ಹಾಗೂ ಇತರ ಸದಸ್ಯರ ಸೂಚನೆಯಂತೆ DRS( ಅಂಪೈರ್ ತೀರ್ಪು ಪುನರ್ ಪರಿಶೀಲನೆ) ನಡೆಸಲು ಮನವಿ ಮಾಡಿದರು.
ಕೊಹ್ಲಿ ಮನವಿಯನ್ನು ಅಂಪೈರ್ ರೋಡ್ ಟಕ್ಕರ್ ತಿರಸ್ಕರಿಸಿದರು. ಕಾರಣ ಮೈದಾನದಲ್ಲಿದ್ದ LED ಸ್ಕ್ರೀನ್‌ನಲ್ಲಿ ಎಲ್‌ಬಿ ಎಸೆತ ರಿಪ್ಲೇ ಮಾಡಲಾಗಿದೆ. ಹೀಗಾಗಿ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅಸಮಾಧಾನಗೊಂಡ ನಾಯಕ ವಿರಾಟ್ ಕೊಹ್ಲಿ, ಅಂಪೈರ್ ಬಳಿ ಈ ಕುರಿತು ಪ್ರಶ್ನಿಸಿದ್ದಾರೆ. ಟಿವಿ ರಿಪ್ಲೇಗೂ ಮೊದಲೇ ರಿವಿವ್ಯೂ ಪಡೆಯಬೇಕು. ಈಗ ಸಾಧ್ಯವಿಲ್ಲ ಎಂದಿದ್ದಾರೆ
ರಿವ್ಯೂವ್ ಪಡೆಯಲು 30 ಸೆಕೆಂಡ್ ಕಾಲಾವಕಾಶವಿರುತ್ತೆ. ಆದರೆ ಈ ಸಮಯ ಮುಗಿಯುವ ಮೊದಲೇ ಸ್ಕ್ರೀನ್‌ನಲ್ಲಿ ರೀಪ್ಲೇ ಹಾಕಿರುವುದು ತಪ್ಪು. ಈ ತಪ್ಪಿನ ಬಳಿಕ ಜೀವದಾನ ಪಡೆದ ಮಾಥ್ಯೂ ವೇಡ್ ಅಬ್ಬರಿಸಿ 80 ರನ್ ಸಿಡಿಸಿದರು.
ವೇಡ್ ಔಟಾಗಿದ್ದರೆ, ಭಾರತ ಸುಲಭವಾಗಿ ಈ ಪಂದ್ಯ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಅತ್ಯುತ್ತಮ ಅವಕಾಶ ಮುಂದಿತ್ತು. ಆದರೆ ಕೆಲ ಸಮಸ್ಯೆಗಳಿಂದ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ.