* ಭಾರತ ಹಾಗೂ ಆಸ್ಟ್ರೇಲಿಯಾ  ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ* ಹರ್ಮನ್‌ಪ್ರೀತ್‌ ಕೌರ್‌ ಪಡೆಗೆ ಸತತ ಎರಡನೇ ಗೆಲುವಿನ ಗುರಿ* ಸದ್ಯ 5 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ

ಮುಂಬೈ(ಡಿ.14): 2ನೇ ಟಿ20 ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ಸೂಪರ್‌ ಓವರ್‌ ಗೆಲುವಿನ ಹುಮ್ಮಸ್ಸಿನಲ್ಲಿರುವ ಆತಿಥೇಯ ಭಾರತ ಮಹಿಳಾ ತಂಡ ಬುಧವಾರ 3ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಸರಣಿ ಮುನ್ನಡೆಯ ನಿರೀಕ್ಷೆಯಲ್ಲಿದೆ. ಆರಂಭಿಕ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಪರಾಭವಗೊಂಡಿದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ 2ನೇ ಪಂದ್ಯದಲ್ಲಿ 187 ರನ್‌ಗಳನ್ನು ಬೆನ್ನಟ್ಟಿ ಪಂದ್ಯ ಟೈ ಮಾಡಿಕೊಂಡಿತ್ತು. ಬಳಿಕ ಸೂಪರ್‌ ಓವರ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿ ಜಯಗಳಿಸಿತ್ತು.

ಸದ್ಯ 5 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದ್ದು, ಈ ಪಂದ್ಯದ ಗೆಲುವಿನ ಮೂಲಕ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಭಾರತ ಎದುರು ನೋಡುತ್ತಿದೆ. ಭಾರತ ತಂಡವು ಬ್ಯಾಟಿಂಗ್‌ನಲ್ಲಿ ಹೆಚ್ಚಾಗಿ ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ ಹಾಗೂ ದೀಪ್ತಿ ಶರ್ಮಾ ಅವರನ್ನು ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್‌ನಲ್ಲಿ ಮೆಘನಾ ಸಿಂಗ್, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.

ಇನ್ನು ಆಸ್ಟ್ರೇಲಿಯಾ ತಂಡದ ಪರ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ನಾಯಕಿ ಅಲಿಸಾ ಹೀಲಿ, ಬೆಥ್ ಮೂನಿ, ತಾಹಿಲಾ ಮೆಕ್‌ಗ್ರಾಥ್, ಆಶ್ಲೆ ಗಾರ್ಡ್ನರ್ ಸೇರಿದಂತೆ ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರನ್ನು ಹೊಂದಿದ್ದು, ಭಾರತಕ್ಕೆ ಮತ್ತೆ ಅಗ್ನಿಪರೀಕ್ಷೆ ಎದುರಾಗುವ ಸಾಧ್ಯತೆಯಿದೆ. 

ಪಂದ್ಯ: ಸಂಜೆ 7ಕ್ಕೆ

ಟಿ20: ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ ಸ್ಮೃತಿ ಮಂಧನಾ

ದುಬೈ: ಭಾರತದ ತಾರಾ ಆಟಗಾರ್ತಿ ಸ್ಮೃತಿ ಮಂಧನಾ ಐಸಿಸಿ ಮಹಿಳಾ ಟಿ20 ರ‍್ಯಾಂಕಿಂಗ್‌‌ನಲ್ಲಿ ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌‌ನಲ್ಲಿ ಮಂಧನಾ 741 ಅಂಕಗಳನ್ನು ಸಂಪಾದಿಸಿದ್ದಾರೆ. ಶಫಾಲಿ ವರ್ಮಾ 6ನೇ ಸ್ಥಾನಕ್ಕೇರಿದ್ದು, ಜೆಮಿಮಾ ರೋಡ್ರಿಗಸ್‌ 9ನೇ ಸ್ಥಾನದಲ್ಲಿದ್ದಾರೆ. 

ಇಂದಿನಿಂದ ರಣಜಿ ಟ್ರೋಫಿ ಕದನ; ಕರ್ನಾಟಕಕ್ಕೆ ಸರ್ವಿಸಸ್ ಸವಾಲು

ಆಸ್ಪ್ರೇಲಿಯಾದ ತಹಿಲಾ ಮೆಗ್ರಾಥ್‌ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲಿಂಗ್‌ ರ‍್ಯಾಂಕಿಂಗ್‌‌ನಲ್ಲಿ ದೀಪ್ತಿ ಶರ್ಮಾ ಹಾಗೂ ರೇಣುಕಾ ಸಿಂಗ್‌ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ದೀಪ್ತಿ ಆಲ್ರೌಂಡರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅಂಧರ ಟಿ20 ವಿಶ್ವಕಪ್‌: ಭಾರತಕ್ಕೆ ಹ್ಯಾಟ್ರಿಕ್‌ ಜಯ

ಕಟಕ್‌: 3ನೇ ಆವೃತ್ತಿ ಅಂಧರ ಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ಸತತ 3ನೇ ಗೆಲುವು ಸಾಧಿಸಿದೆ. ಮಂಗಳವಾರ ಆತಿಥೇಯ ಭಾರತ ಬಾಂಗ್ಲಾದೇಶ ವಿರುದ್ಧ 3 ವಿಕೆಟ್‌ ಜಯಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 20 ಓವರಲ್ಲಿ 4 ವಿಕೆಟ್‌ಗೆ 166 ರನ್‌ ಕಲೆ ಹಾಕಿತು. ಆಶಿಕುರ್ರಹ್ಮಾನ್‌ 75, ಆರಿಫ್‌ 33 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಸ್ಪರ್ಧಾರ್‍ತ್ಮಕ ಗುರಿ ಬೆನ್ನತ್ತಿದ ಭಾರತ ಕೇವಲ 13.1 ಓವರಲ್ಲಿ 3 ವಿಕೆಟ್‌ಗೆ ಜಯಗಳಿಸಿತು. ದುರ್ಗಾ ರಾವ್‌ 73 ರನ್‌ ಬಾರಿಸಿದರೆ, ಬಡನಾಯಕ್‌ 33 ರನ್‌ ಗಳಿಸಿದರು.

ರಣಜಿ ಟ್ರೋಫಿ: ರಾಜ್ಯಕ್ಕೆ ಆರಂಭಿಕ ಆಘಾತ

ಬೆಂಗಳೂರು: ಮಳೆಯ ನಡುವೆಯೇ 2022-23ರ ಸಾಲಿ ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿ ಆರಂಭಗೊಂಡಿದ್ದು, ಮೊದಲ ದಿನ 8 ಬಾರಿ ಚಾಂಪಿಯನ್‌ ಕರ್ನಾಟಕ ತಂಡ ಸರ್ವಿಸಸ್‌ ವಿರುದ್ಧ ಆರಂಭಿಕ ಆಘಾತಕ್ಕೆ ಒಳಗಾಗಿದೆ.

ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ ಮಳೆಯಿಂದಾಗಿ ಒಂದೂವರೆ ಗಂಟೆಗಳ ಕಾಲ ತಡವಾಗಿ ಆರಂಭಗೊಂಡಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜ್ಯ ತಂಡ ದಿವೇಶ್‌ ಪಠಾಣಿಯಾ ಮಾರಕ ದಾಳಿಗೆ ಕುಸಿದು ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 148 ರನ್‌ ಕಲೆ ಹಾಕಿದೆ. ಆರಂಭಿಕರಾದ ನಾಯಕ ಮಯಾಂಕ್‌(08), ಆರ್‌.ಸಮರ್ಥ್‌(08) ಬೇಗನೇ ನಿರ್ಗಮಿಸಿದರು. 

ಆದರೆ ಚೊಚ್ಚಲ ರಣಜಿ ಪಂದ್ಯವಾಡುತ್ತಿರುವ ನಿಕಿನ್‌ ಜೋಸ್‌ ಹಾಗೂ ವಿಶಾಲ್‌(33) 3ನೇ ವಿಕೆಟ್‌ಗೆ 84 ರನ್‌ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ನಿಕಿನ್‌ 62 ರನ್‌ ಸಿಡಿಸಿ ನಿರ್ಗಮಿಸಿದರು. ಶರತ್‌(09) ಹಾಗೂ ಕೆ.ಗೌತಮ್‌(10) 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದು, ಸ್ಪರ್ಧಾತ್ಮಕ ಮೊತ್ತ ಗಳಿಸುವ ಹೊಣೆ ಹೊತ್ತುಕೊಂಡಿದ್ದಾರೆ. ದಿವೇಶ್‌ 40 ರನ್‌ಗೆ 5 ವಿಕೆಟ್‌ ಕಬಳಿಸಿದರು.

ಸ್ಕೋರ್‌: ಕರ್ನಾಟಕ 40 ಓವರಲ್ಲಿ 148/6 (ನಿಕಿನ್‌ 62, ವಿಶಾಲ್‌ 33, ದಿವೇಶ್‌ 5-40)