Asianet Suvarna News Asianet Suvarna News

Team India ಮಹಿಳಾ ತಂಡದ ಕೋಚ್‌ ರಮೇಶ್ ಪೊವಾರ್‌ ಅವಧಿ ಅಂತ್ಯ..!

* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಪ್ರವೇಶಿಸಲು ಭಾರತ ವಿಫಲ

* ಭಾರತ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ರಮೇಶ್‌ ಪೊವಾರ್‌ ಅವಧಿಯೂ ಮುಕ್ತಾಯ

* ಡಬ್ಲ್ಯುವಿ ರಾಮನ್‌ ಅವರ ಬದಲಿಗೆ ಕೋಚ್‌ ಹುದ್ದೆಗೇರಿದ್ದ ರಮೇಶ್ ಪೊವಾರ್‌ 

India Women Cricket Team head coach Ramesh Powar term ends following team World Cup exit kvn
Author
Bengaluru, First Published Apr 1, 2022, 9:10 AM IST

ನವದೆಹಲಿ(ಏ.01): ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ (ICC Women's World Cup) ಮುಗಿಯುವುದರೊಂದಿಗೆ ಭಾರತ ಮಹಿಳಾ ಕ್ರಿಕೆಟ್‌ ತಂಡದ (Indian Women's Cricket Team) ಕೋಚ್‌ ರಮೇಶ್‌ ಪೊವಾರ್‌ ಅವಧಿಯೂ ಮುಕ್ತಾಯಗೊಂಡಿದೆ. ಪೊವಾರ್‌ ಕಳೆದ ವರ್ಷ ಮಾರ್ಚ್‌ನಲ್ಲಿ ತಂಡದ ಕೋಚ್‌ ಹುದ್ದೆಗೆ ನೇಮಕಗೊಂಡಿದ್ದರು. ಡಬ್ಲ್ಯುವಿ ರಾಮನ್‌ (WV Raman) ಅವರ ಬದಲಿಗೆ ಕೋಚ್‌ ಹುದ್ದೆಗೇರಿದ್ದ ರಮೇಶ್ ಪೊವಾರ್‌ (Ramesh Powar) ಅವಧಿಯಲ್ಲಿ ಭಾರತ ಕಳಪೆ ಪ್ರದರ್ಶನ ತೋರಿದ್ದು, ವಿಶ್ವಕಪ್‌ನಲ್ಲಿ ಲೀಗ್‌ ಹಂತದಲ್ಲೇ ನಿರ್ಗಮಿಸಿತ್ತು. ‘ಪೊವಾರ್‌ ಕೋಚ್‌ ಒಪ್ಪಂದ ನವೀಕರಣಕ್ಕೆ ಮಾಡಲ್ಲ. ಆದರೆ ಅವರು ಮರು ಆಯ್ಕೆ ಬಯಸಿದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

ಇನ್ನು, ಈ ಬಾರಿ ಹೊಸ ಕೋಚ್‌ ನೇಮಕದಲ್ಲಿ ಎನ್‌ಸಿಎ ನಿರ್ದೇಶಕ ವಿವಿಎಸ್‌ ಲಕ್ಷ್ಮಣ್‌ (VVS Laxman) ಮಹತ್ವದ ಪಾತ್ರ ವಹಿಸಲಿದ್ದಾರೆ. ಮುಂದಿನ ವರ್ಷ ಚೊಚ್ಚಲ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ ಆರಂಭವಾಗಲಿದ್ದು, ಹೊಸ ಪೀಳಿಗೆಯ ತಂಡ ಸಿದ್ಧಪಡಿಸಲು ಬಿಸಿಸಿಐ (BCCI) ಯೋಜನೆ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

ಮಿಥಾಲಿ ರಾಜ್, ಜೂಲನ್ ಗೋಸ್ವಾಮಿಗೆ ಕೊನೆಯ ಪಂದ್ಯ?

ಈ ಬಾರಿಯಾದರೂ ಟೀಂ ಇಂಡಿಯಾ (Team India) ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಗೆಲ್ಲಬಹುದೆಂಬ ಕೋಟ್ಯಂತರ ಭಾರತೀಯರ ಕನಸು ಕೊನೆಗೂ ಈಡೇರಲಿಲ್ಲ. ಕಳೆದ ಬಾರಿ ರನ್ನರ್‌-ಅಪ್‌ ಆಗಿದ್ದ ಭಾರತ ಈ ಬಾರಿ ಸೆಮಿಫೈನಲ್‌ ಪ್ರವೇಶಿಸಲೂ ಆಗದೆ, ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್‌ ಬೈ ಹೇಳಿದೆ. ದಾಖಲೆಯ 6 ಬಾರಿ ವಿಶ್ವಕಪ್‌ನಲ್ಲಿ ಆಡಿದ ಮಿಥಾಲಿ ರಾಜ್ (Mithali Raj) ಮತ್ತು 5 ಬಾರಿ ವಿಶ್ವಕಪ್‌ನಲ್ಲಿ ಆಡಿದ ವೇಗಿ ಜೂಲನ್‌ ಗೋಸ್ವಾಮಿ (Jhulan Goswami) ಅವರ ವಿಶ್ವಕಪ್‌ ಕನಸು ಭಗ್ನವಾಗಿದ್ದು, ಸೋಲಿನೊಂದಿಗೆ ವಿಶ್ವಕಪ್‌ಗೆ ವಿದಾಯ ಹೇಳಿದ್ದಾರೆ. ಇಬ್ಬರಿಗೂ 39 ವರ್ಷವಾಗಿದ್ದು, ಇದು ಇಬ್ಬರಿಗೂ ಬಹುತೇಕ ಕೊನೆಯ ಪಂದ್ಯ. ಈ ವಿಶ್ವಕಪ್‌ ಬಳಿಕ ನಿವೃತ್ತಿಯಾಗುವುದಾಗಿ ಇಬ್ಬರೂ ತಿಳಿಸಿದ್ದರು.

ಆಸೀಸ್‌-ಇಂಗ್ಲೆಂಡ್‌ ನಡುವೆ 5ನೇ ಬಾರಿ ಫೈನಲ್‌ ಫೈಟ್‌

ಕ್ರೈಸ್ಟ್‌ಚರ್ಚ್‌‍: ಹ್ಯಾಟ್ರಿಕ್‌ ಸೋಲಿನೊಂದಿಗೆ ಟೂರ್ನಿಯ ಅಭಿಯಾನ ಆರಂಭಿಸಿದ್ದ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ (England Women's Cricket Team) 12ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಲು ಯಶಸ್ವಿಯಾಗಿದೆ. ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ ಹಣಾಹಣಿಯಲ್ಲಿ 137 ರನ್‌ಗಳ ಭರ್ಜರಿ ಜಯ ಸಾಧಿಸಿ ಇಂಗ್ಲೆಂಡ್‌ 8ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟರೆ, ದಕ್ಷಿಣ ಆಫ್ರಿಕಾದ ಚೊಚ್ಚಲ ಫೈನಲ್‌ ಕನಸು ಭಗ್ನಗೊಂಡಿತು. ಇದೀಗ ಪ್ರಶಸ್ತಿಗಾಗಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳು ಸೆಣಸಾಟ ನಡೆಸಲಿವೆ.

ICC Women's World Cup: ಹರಿಣಗಳನ್ನು ಬೇಟೆಯಾಡಿ ಫೈನಲ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್..!

ಮಹಿಳಾ ವಿಶ್ವಕಪ್‌ ಫೈನಲ್‌ ಪಂದ್ಯ ಏಪ್ರಿಲ್ 3ಕ್ಕೆ ನಿಗದಿಯಾಗಿದ್ದು, ದಾಖಲೆಯ 6 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ ಹಾಗೂ 4 ಬಾರಿ ಚಾಂಪಿಯನ್‌ ಇಂಗ್ಲೆಂಡ್‌ ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಮೊದಲು 4 ಬಾರಿ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, 3 ಬಾರಿ ಆಸೀಸ್‌ ಪ್ರಶಸ್ತಿ ಗೆದ್ದುಕೊಂಡಿದೆ. ಕೊನೆಯ ಬಾರಿ 1988ರಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಆವೃತ್ತಿಯ ಉಭಯ ತಂಡಗಳ ನಡುವಿನ ಹಣಾಹಣಿಯಲ್ಲಿ ಆಸೀಸ್‌ 12 ರನ್‌ಗಳ ಗೆಲುವು ಸಾಧಿಸಿತ್ತು. ಲೀಗ್‌ ಹಂತದಲ್ಲಿ ಎಲ್ಲಾ 7 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿದ್ದ ಆಸೀಸ್‌, ಸೆಮೀಸ್‌ನಲ್ಲಿ ವೆಸ್ಟ್‌ಇಂಡೀಸ್‌ಗೆ ಸೋಲುಣಿಸಿತ್ತು.

Follow Us:
Download App:
  • android
  • ios