Asianet Suvarna News Asianet Suvarna News

ICC Women's World Cup: ಹರಿಣಗಳನ್ನು ಬೇಟೆಯಾಡಿ ಫೈನಲ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್..!

* ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್

* ದಕ್ಷಿಣ ಆಫ್ರಿಕಾ ವಿರುದ್ದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ 137 ರನ್‌ಗಳ ಭರ್ಜರಿ ಜಯ

* ಫೈನಲ್‌ನಲ್ಲಿ ಪ್ರಶಸ್ತಿ ಇಂಗ್ಲೆಂಡ್-ಆಸ್ಟ್ರೇಲಿಯಾ ಕಾದಾಟ

England Thrash South Africa by 137 runs and enter ICC Womens World Cup Final kvn
Author
Bengaluru, First Published Mar 31, 2022, 4:41 PM IST

ಕ್ರೈಸ್ಟ್‌ಚರ್ಚ್‌(ಮಾ.31): ಆರಂಭಿಕ ಬ್ಯಾಟರ್‌ ಡೇನಿಯಲ್ ವ್ಯಾಟ್‌ (Danielle Wyatt) ಆಕರ್ಷಕ ಶತಕ ಹಾಗೂ ಸ್ಪಿನ್ನರ್ ಸೋಫಿಯಾ ಎಕ್ಲೆಸ್ಟೋನ್‌ (Sophie Ecclestone) ಮಾರಕ ದಾಳಿಯ ನೆರವಿನಿಂದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women's World Cup) ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಮತ್ತೊಮ್ಮೆ ಇಂಗ್ಲೆಂಡ್‌ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಏಪ್ರಿಲ್ 03ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಒಂದು ಕಡೆ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವು ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದರೆ, ಹಾಲಿ ಚಾಂಪಿಯನ್‌ ಇಂಗ್ಲೆಂಡ್ ತಂಡವು ಟೂರ್ನಿಯ ಆರಂಭಿಕ ಮೂರು ಪಂದ್ಯಗಳನ್ನು ಸೋತು, ಆ ಬಳಿಕ ಅಮೋಘ ಪ್ರದರ್ಶನದೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 293 ರನ್ ಬಾರಿಸುವ ಮೂಲಕ, ದಕ್ಷಿಣ ಆಫ್ರಿಕಾ ತಂಡಕ್ಕೆ ಕಠಿಣ ಗುರಿ ನೀಡಿತ್ತು. ಈ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲೇ ಆರಂಭಿಕ ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಲೌರ ವೋಲ್ವರ್ತ್‌ ಶೂನ್ಯ ಸುತ್ತಿದರೆ, ಲಿಜೆಲ್ಲೆ ಲೀ 2 ರನ್ ಬಾರಿಸಿ ಪೆವಿಲಿಯನ್ ಸೇರಿದರು. ದಕ್ಷಿಣ ಆಫ್ರಿಕಾ ತಂಡವು ತನ್ನ ಖಾತೆಗೆ 8 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್‌ಗಳಿಬ್ಬರು ಪೆವಿಲಿಯನ್ ಸೇರಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಲಾರಾ ಗುಡಾಲ್(28), ನಾಯಕಿ ಸುನೆ ಲೌಸ್(21), ಮಿನ್ಯಾನ್‌ ಡು ಪ್ರೀಜ್‌(30), ತ್ರಿಶಾ ಚೆಟ್ಟಿ(21) ಹಾಗೂ ಮ್ಯಾರಿಜೇನ್ ಕ್ಯಾಪ್(21) ಕೆಲಕಾಲ ಇಂಗ್ಲೆಂಡ್ ಬೌಲರ್‌ಗಳೆದುರು ಪ್ರತಿರೋಧ ತೋರುವ ಯತ್ನ ನಡೆಸಿದರಾದರೂ, ಸ್ಪಿನ್ನರ್‌ ಸೋಫಿಯಾ ಎಕ್ಲೆಸ್ಟೋನ್‌ ಮಾರಕ ದಾಳಿ ನಡೆಸುವ ಮೂಲಕ, ಹರಿಣಗಳ ಬ್ಯಾಟರ್‌ಗಳನ್ನು ಪೆವಿಲಿಯನ್ ಪೆರೇಡ್ ನಡೆಸುವಂತೆ ಮಾಡಿದರು. ಮಾರಕ ದಾಳಿ ನಡೆಸಿದ ಸೋಫಿಯಾ ಎಕ್ಲೆಸ್ಟೋನ್‌ 8 ಓವರ್‌ ಬೌಲಿಂಗ್ ಮಾಡಿ 36 ರನ್‌ ನೀಡಿ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಪರಿಣಾಮ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 38 ಓವರ್‌ಗಳಲ್ಲಿ 156 ರನ್‌ ಬಾರಿಸಿ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು.

ICC Women's World Cup: ವಿಂಡೀಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಆಸ್ಟ್ರೇಲಿಯಾ

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡದ ಆರಂಭ ಕೂಡಾ ಅಷ್ಟೇನು ಉತ್ತಮವಾಗಿರಲಿಲ್ಲ. ಬಿಯುಮೋಟ್ 7 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕಿ ಹೀಥರ್ ನೈಟ್‌ ಕೇವಲ ಒಂದು ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಸ್ಕೀವರ್ 15 ಹಾಗೂ ಆಮಿ ಜೋನ್ಸ್‌ 28 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ ಇಂಗ್ಲೆಂಡ್ ತಂಡವು 126 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು.

ವ್ಯಾಟ್-ಡಂಕ್ಲೆ ಜುಗಲ್ಬಂದಿ: ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಬ್ಯಾಟಿಂಗ್ ನಡೆಸಿದ ಡೇನಿಯಲ್ ವ್ಯಾಟ್ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ವ್ಯಾಟ್ ಒಟ್ಟು 125 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 129 ರನ್‌ ಬಾರಿಸಿದರು. ಇದರ ಜತಗೆ 5ನೇ ವಿಕೆಟ್‌ಗೆ ಡಂಕ್ಲೆ ಜತೆಗೂಡಿ ಶತಕದ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು. ಡಂಕ್ಲೆ 72 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 60 ರನ್‌ ಬಾರಿಸುವ ಮೂಲಕ ಡೇನಿಯಲ್‌ ವ್ಯಾಟ್‌ಗೆ ಉತ್ತಮ ಸಾಥ್ ನೀಡಿದರು.

 

Follow Us:
Download App:
  • android
  • ios