Asianet Suvarna News Asianet Suvarna News

T20 World Cup: ಆಫ್ಘನ್‌ ವಿರುದ್ಧವಾದ್ರೂ ಗೆಲ್ಲುತ್ತಾ ಭಾರತ?

*ಸತತ 2 ಸೋಲು ಕಂಡಿರುವ ಭಾರತಕ್ಕಿದು ಮಹತ್ವದ ಪಂದ್ಯ
*ಸೆಮೀಸ್‌ ಆಸೆ ಸ್ವಲ್ಪ ಮಟ್ಟಿಗಾದರೂ ಉಳಿಯಬೇಕಿದ್ದರೆ ಗೆಲುವು ಅನಿವಾರ್ಯ
*2 ಗೆಲುವುಗಳೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ
*ಆರ್‌.ಅಶ್ವಿನ್‌ರನ್ನು ಆಡಿಸುವ ಮನಸು ಮಾಡ್ತಾರಾ ಕ್ಯಾಪ್ಟನ್‌ ಕೊಹ್ಲಿ?

India will face Afghanistan in its third T20 World Cup match in Abu Dhabi on Wednesday
Author
Bengaluru, First Published Nov 3, 2021, 6:37 AM IST

ಅಬು ಧಾಬಿ (ನ.3): ಪಾಕಿಸ್ತಾನ (Pakistan)ಹಾಗೂ ನ್ಯೂಜಿಲೆಂಡ್‌ (New Zealand) ವಿರುದ್ಧ ಸೋತು ಸುಣ್ಣವಾಗಿರುವ ಟೀಂ ಇಂಡಿಯಾ, ಬುಧವಾರ ಅಫ್ಘಾನಿಸ್ತಾನ (Afghanistan) ವಿರುದ್ಧ ಸೆಣಸಲಿದ್ದು ಈ ಪಂದ್ಯದಲ್ಲಾದರೂ ತಂಡ ಗೆಲ್ಲಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಸೆಣಸಾಟದಲ್ಲಿ ಭಾರತ ಗೆದ್ದರೆ ಹೆಚ್ಚೇನೂ ಹೊಗಳಿಕೆ ಸಿಗುವುದಿಲ್ಲ, ಆದರೆ ಸೋತರೆ ಅಭಿಮಾನಿಗಳ ಕೆಂಗಣ್ಣಿಗೆ ವಿರಾಟ್‌ ಕೊಹ್ಲಿ (Virat Kohli) ಪಡೆ ಗುರಿಯಾಗಬಹುದು.

ಆರ್‌.ಅಶ್ವಿನ್‌ರನ್ನು ಆಡಿಸುವ ಮನಸು ಮಾಡ್ತಾರಾ ಕ್ಯಾಪ್ಟನ್‌ ಕೊಹ್ಲಿ?

ಹಿರಿಯ ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌ 4 ವರ್ಷಗಳ ಬಳಿಕ ಸೀಮಿತ ಓವರ್‌ ತಂಡಕ್ಕೆ ಆಯ್ಕೆಯಾದರೂ, ವಿಶ್ವಕಪ್‌ನ ಎರಡು ಮಹತ್ವದ ಪಂದ್ಯಗಳಲ್ಲಿ ಅವರ ಅನುಭವವನ್ನು ಬಳಸಿಕೊಳ್ಳಲು ಕೊಹ್ಲಿ ಮುಂದಾಗಲಿಲ್ಲ. ಅಶ್ವಿನ್‌ರನ್ನು (R Ashwin) ತಂಡಕ್ಕೆ ಆಯ್ಕೆ ಮಾಡುವುದೇ ನಾಯಕನಿಗೆ ಇಷ್ಟವಿರಲಿಲ್ಲ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅವರನ್ನು ಆಡಿಸದೆ ಇರುವುದು ಆ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ; ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ!

ಸತತ 2 ಸೋಲು ಟೀಂ ಇಂಡಿಯಾ ಸೆಮಿಫೈನಲ್‌ ರೇಸ್‌ನಲ್ಲಿ ಬಹಳ ಹಿಂದೆ ಉಳಿಯುವಂತೆ ಮಾಡಿದೆ. ತಂಡ ಉಳಿದಿರುವ ಮೂರೂ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆದ್ದು ನ್ಯೂಜಿಲೆಂಡ್‌ ಒಂದು ಪಂದ್ಯದಲ್ಲಿ ಸೋಲಬೇಕಿದೆ. ಆಗಷ್ಟೇ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಸಿಗಬಹುದು.

ಹಾರ್ದಿಕ್‌ಗೆ ಕೊಕ್‌?

ಕಳೆದ ಪಂದ್ಯದಲ್ಲಷ್ಟೇ ಬೌಲ್‌ ಮಾಡಲು ಆರಂಭಿಸಿರುವ ಹಾರ್ದಿಕ್‌ ಪಾಂಡ್ಯ (Hardik Pandya), ತಮಗೆ ನೀಡಿರುವ ಫಿನಿಶರ್‌ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. 2 ಪಂದ್ಯಗಳಲ್ಲಿ ಒಟ್ಟು 35 ಎಸೆತಗಳನ್ನು ಎದುರಿಸಿರುವ ಹಾರ್ದಿಕ್‌ ಕೇವಲ 31 ರನ್‌ ಕಲೆಹಾಕಿದ್ದಾರೆ. ಒಂದು ವೇಳೆ ಸೂರ್ಯಕುಮಾರ್‌ ಯಾದವ್‌ ಬೆನ್ನು ನೋವಿನಿಂದ ಚೇತರಿಸಿಕೊಂಡು ಆಯ್ಕೆಗೆ ಲಭ್ಯರಿದ್ದರೆ ಹಾರ್ದಿಕ್‌ರನ್ನು ಹೊರಗಿಡುವ ಸಾಧ್ಯತೆ ಇದೆ. ಇಶಾನ್‌ ಕಿಶನ್‌ಗೆ ಮತ್ತೊಂದು ಅವಕಾಶ ಸಿಗಬಹುದು.

IPL 2022: ಹರಾಜಿಗೂ ಮುನ್ನ RCB ಈ ನಾಲ್ವರು ಆಟಗಾರರನ್ನು ರೀಟೈನ್‌ ಮಾಡಬಹುದು..!

ರೋಹಿತ್‌ ಶರ್ಮಾ (Rohit Sharma) ಆರಂಭಿಕನ ಸ್ಥಾನಕ್ಕೆ ಮರಳುವುದು ಬಹುತೇಕ ಖಚಿತ. ವಿಶ್ವಕಪ್‌ ಮುಗಿದ ಮೇಲೆ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳುವ ನೆಚ್ಚಿನ ಅಭ್ಯರ್ಥಿ ಎನಿಸಿರುವ ರೋಹಿತ್‌, ಬ್ಯಾಟಿಂಗ್‌ ಲಯಕ್ಕೆ ಮರಳಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಕೆ.ಎಲ್‌.ರಾಹುಲ್‌ (KL Rahul) ಮೇಲೂ ಒತ್ತಡವಿದೆ. ಎರಡೂ ಪಂದ್ಯಗಳ ಪವರ್‌-ಪ್ಲೇನಲ್ಲಿ ಭಾರತ ಸಂಪೂರ್ಣ ವೈಫಲ್ಯ ಕಂಡಿದೆ. ಈ ಸಮಸ್ಯೆ ಮತ್ತೆ ಎದುರಾಗದಂತೆ ನೋಡಿಕೊಳ್ಳಬೇಕಿದೆ. ರಶೀದ್‌ ಖಾನ್‌, ಮೊಹಮದ್‌ ನಬಿ ತಮ್ಮ ಐಪಿಎಲ್‌ ಅನುಭವವನ್ನು ಬಳಸಿಕೊಂಡು ಭಾರತದ ಗಾಯದ ಮೇಲೆ ಬರೆ ಹಾಕಲು ಕಾಯುತ್ತಿದ್ದಾರೆ.

Ind vs NZ T20I ಕ್ರಿಕೆಟ್ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್‌ಗೆ ನಾಯಕ ಪಟ್ಟ..?

ತಂಡಕ್ಕಿದೆ ಅಶ್ವಿನ್‌ ಅವಶ್ಯಕತೆ?: ಆಫ್ಘನ್‌ ತಂಡ ಆಕ್ರಮಣಕಾರಿ ಆಟದ ಮೂಲಕವೇ ಈ ಟೂರ್ನಿಯಲ್ಲಿ 2 ಗೆಲುವು ಸಾಧಿಸಿದೆ. ಆಸಿಫ್‌ ಅಲಿ ಒಂದು ಓವರಲ್ಲಿ 4 ಸಿಕ್ಸರ್‌ ಸಿಡಿಸದಿದ್ದರೆ ಪಾಕಿಸ್ತಾನ ವಿರುದ್ಧವೂ ಜಯಿಸುತ್ತಿತ್ತೇನೋ. ಮೊಹಮದ್‌ ಶಹಜಾದ್‌, ಹಜರತುಲ್ಲಾ ಝಝಾಯ್‌, ನಜೀಬುಲ್ಲಾ ಜದ್ರಾನ್‌, ರಹಮಾನುಲ್ಲಾ ಗುರ್ಬಾಜ್‌, ಮೊಹಮದ್‌ ನಬಿ ಹೀಗೆ ಪಿಂಚ್‌ ಹಿಟ್ಟರ್‌ಗಳ ದಂಡೇ ಇದೆ. ಹೀಗಾಗಿ ಅಶ್ವಿನ್‌ರಂತಹ ಅನುಭವಿ ಸ್ಪಿನ್ನರ್‌ನ ಅವಶ್ಯಕತೆ ಟೀಂ ಇಂಡಿಯಾಗೆ ಎದುರಾಗಬಹುದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌, ರಾಹುಲ್‌, ಕೊಹ್ಲಿ(ನಾಯಕ), ಸೂರ್ಯಕುಮಾರ್‌/ಹಾರ್ದಿಕ್‌, ಪಂತ್‌, ಕಿಶನ್‌, ಜಡೇಜಾ, ಶಾರ್ದೂಲ್‌, ಶಮಿ, ಬೂಮ್ರಾ, ಅಶ್ವಿನ್‌/ವರುಣ್‌.

ಆಫ್ಘನ್‌: ಝಝಾಯ್‌, ಶಹಜಾದ್‌, ರಹಮಾನುಲ್ಲಾ, ಹಶ್ಮತುಲ್ಲಾ/ಘನಿ, ನಬಿ(ನಾಯಕ), ನಜೀಬುಲ್ಲಾ, ಗುಲ್ಬದಿನ್‌, ರಶೀದ್‌, ಕರೀಂ/ಮುಜೀಬ್‌, ನವೀನ್‌, ಹಮೀದ್‌.

T20 world Cup: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣವೇನು..?

ಪಿಚ್‌ ರಿಪೋರ್ಟ್‌

ಈ ವಿಶ್ವಕಪ್‌ನಲ್ಲಿ ಅಬು ಧಾಬಿಯಲ್ಲಿ ನಡೆದಿರುವ 8 ಪಂದ್ಯಗಳಲ್ಲಿ 6ರಲ್ಲಿ ಮೊದಲು ಫೀಲ್ಡ್‌ ಮಾಡಿದ ತಂಡ ಗೆದ್ದಿದೆ. 2ನೇ ಇನ್ನಿಂಗ್ಸ್‌ ವೇಳೆ ಇಬ್ಬನಿ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಮೊದಲು ಬ್ಯಾಟ್‌ ಮಾಡುವ ತಂಡ 165-170 ರನ್‌ ಕಲೆಹಾಕಿದರೆ ಗೆಲುವು ಸಿಗಬಹುದು.

Follow Us:
Download App:
  • android
  • ios