* ಭಾರತ-ವೆಸ್ಟ್ ಇಂಡೀಸ್ ನಡುವಿನ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ* ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ* ಇಂದು ಆರಂಭವಾಗಲಿದೆ 5 ಪಂದ್ಯಗಳ ಟಿ20 ಸರಣಿಯ ಎರಡನೇ ಟಿ20 ಪಂದ್ಯ
ಬಾಸೆಟೆರೆ(ಆ.01): ವೆಸ್ಟ್‌ಇಂಡೀಸ್ ವಿರುದ್ಧ ಪ್ರಚಂಡ ಪ್ರದರ್ಶನ ತೋರುತ್ತಿರುವ ಭಾರತ ಸೋಮವಾರ ನಡೆಯಲಿರುವ 2ನೇ ಟಿ20 ಪಂದ್ಯವನ್ನು ಗೆದ್ದು ತನ್ನ ಲಯ ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಮೊದಲ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದ್ದ ಭಾರತ ಮತ್ತೊಂದು ಸಾಂಘಿಕ ಪ್ರದರ್ಶನ ತೋರುವ ಗುರಿ ಹೊಂದಿದ್ದು, ಆತಿಥೇಯ ವಿಂಡೀಸ್ ಭಾರೀ ಒತ್ತಡದಲ್ಲಿದೆ.
ಭಾರತ ತಂಡ ಆರಂಭಿಕ ಜೋಡಿಯ ಪ್ರಯೋಗ ನಡೆಸುತ್ತಿದ್ದು, ಅದು ಈ ಪಂದ್ಯದಲ್ಲೂ ಮುಂದುವರಿಯಬಹುದು. ರೋಹಿತ್ ಶರ್ಮಾರ ಚಾಣಾಕ್ಷ ನಾಯಕತ್ವ ಸಹ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ, ಕೆಲ ಪ್ರತಿಭಾವಂತ ಆಟಗಾರರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಅಶ್‌ರ್‍ದೀಪ್ ಸಿಂಗ್ ಗಮನ ಸೆಳೆಯುತ್ತಿದ್ದು, ಆಲ್ರೌಂಡರ್ ದೀಪಕ್ ಹೂಡಾ ಈ ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಫಿನಿಶರ್ ಪಾತ್ರದಲ್ಲಿ ಮಿಂಚುತ್ತಿರುವುದು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.
ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಇದೀಗ ವಿಂಡೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 16 ಪಂದ್ಯಗಳಲ್ಲಿ 24 ರನ್ ಬಾರಿಸಿದ್ದರು. ಕೆ ಎಲ್ ರಾಹುಲ್ ಸಂಪೂರ್ಣ ಫಿಟ್ ಆಗಿ ತಂಡ ಕೂಡಿಕೊಳ್ಳುವವರೆಗೂ ಟೀಂ ಇಂಡಿಯಾ ಈ ರೀತಿಯ ಪ್ರಯೋಗಗಳನ್ನು ಮುಂದುವರೆಸುತ್ತಲೇ ಇರುವುದೇ ಎನ್ನುವ ಕುತೂಹಲ ಜೋರಾಗಿದೆ.
ವಿಂಡೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಹಂತದಲ್ಲಿ 170 ರನ್‌ಗಳಿಸಿದರೆ ಹೆಚ್ಚು ಎನ್ನುವ ಪರಿಸ್ಥಿತಿಯಿತ್ತು. ಆದರೆ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ ಅಜೇಯ 41 ರನ್ ಬಾರಿಸುವ ಮೂಲಕ ತಂಡ 190 ರನ್ ಕಲೆಹಾಕುವಂತೆ ಮಾಡಿದರು. ಕೊನೆಯ ಎರಡು ಓವರ್‌ಗಳಲ್ಲಿ ದಿನೇಶ್ ಕಾರ್ತಿಕ್ 36 ರನ್ ಸಿಡಿಸುವ ಮೂಲಕ ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.
ಜಿಂಜಾಬ್ವೆ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ, ಧವನ್ ನಾಯಕ, ಕೊಹ್ಲಿಗೆ ರೆಸ್ಟ್!
ಇನ್ನು ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡಿದ್ದ ವೆಸ್ಟ್ ಇಂಡೀಸ್ ತಂಡವು, ಟಿ20 ಸರಣಿಯಲ್ಲಾದರೂ ಭಾರತಕ್ಕೆ ಪ್ರತಿರೋಧ ತೋರಬಹುದು ಎನ್ನುವ ನಿರೀಕ್ಷೆ ಮೊದಲ ಪಂದ್ಯದಲ್ಲಿ ಹುಸಿಯಾಗಿತ್ತು. ಇನ್ನು ಸ್ಪೋಟಕ ಬ್ಯಾಟರ್ ಶಿಮ್ರೊನ್ ಹೆಟ್ಮೇಯರ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರೂ ಸಹಾ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದರು. ನಿಕೋಲಸ್ ಪೂರನ್, ರೋಮನ್ ಪೋವೆಲ್, ಹೆಟ್ಮೇಯರ್, ಕೈಲ್ ಮೇಯರ್ಸ್ ಅವರಂತಹ ಆಟಗಾರರು ಜವಬ್ದಾರಿಯುತ ಪ್ರದರ್ಶನ ತೋರಿದರೇ ಮಾತ್ರ ಬಲಿಷ್ಠ ಭಾರತಕ್ಕೆ ತಿರುಗೇಟು ನೀಡಲು ಸಾಧ್ಯವಾಗಲಿದೆ.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಭಾರತ: ರೋಹಿತ್ ಶರ್ಮಾ(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಆರ್ಶದೀಪ್ ಸಿಂಗ್.
ವೆಸ್ಟ್ ಇಂಡೀಸ್: ಶಮರ್ಥ್ ಬ್ರೂಕ್ಸ್, ಶಿಮ್ರೊನ್ ಹೆಟ್ಮೇಯರ್, ರೋಮನ್ ಪೊವೆಲ್, ನಿಕೋಲಸ್ ಪೂರನ್(ನಾಯಕ&ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡೆನ್ ಸ್ಮಿತ್, ಕೀಮೊ ಪೌಲ್, ಅಲ್ಜೆರಿ ಜೋಸೆಪ್, ಒಬೆಡ್ ಮೆಕಾಯ್.
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್, ಫ್ಯಾನ್ ಕೋಡ್
