ಜಿಂಬಾಬ್ವೆ ವಿರುದ್ದದ 3 ಪಂದ್ಯಗಳ ಏಕದಿನ ಸರಣಿ ಟೀಂ ಇಂಡಿಯಾ ಪ್ರಕಟಗೊಂಡಿದೆ. ಶಿಖರ್ ಧವನ್ ನಾಯಕ ಪಟ್ಟ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ.

ಮುಂಬೈ(ಜು.30): ವೆಸ್ಟ್ ವಿರುದ್ಧದ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಟೀಂ ಇಂಡಿಯಾ ಇದೀಗ ಟಿ20 ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಲು ಸಜ್ಜಾಗಿದೆ. ಈ ಸರಣಿ ನಡುವೆ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ತಂಡ ಪ್ರಕಟಗೊಂಡಿದೆ. ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ರಾಹುಲ್ ತ್ರಿಪಾಠಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಇತ್ತ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಇದೀಗ ಜಿಂಬಾಬ್ವೆ ವಿರುದ್ಧ ಅಬ್ಬರಿಸಲು ಸಜ್ಜಾಗಿದೆ. ವಿಂಡೀಸ್ ಸರಣಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಬಡ್ತಿ ಪಡೆದ ಧವನ್, ಜಿಂಬಾಬ್ವೆ ಸರಣಿಗೂ ನಾಯಕ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ.

ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದ ರಾಹುಲ್ ತ್ರಿಪಾಠಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಏಕದಿನ ಸರಣಿಗೆ ತ್ರಿಪಾಠಿ ಆಯ್ಕೆಯಾಗಿದ್ದಾರೆ. ಮತ್ತೊಂದು ಮಹತ್ವದ ಬದಲಾವಣೆ ಎಂದರೆ ಕಳೆದ 6 ತಿಂಗಳಿನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ದೀಪಕ್ ಚಹಾರ್ ಮತ್ತೆ ತಂಡ ಸೇರಿಕೊಂಡಿದ್ದಾರೆ. ಗಾಯದ ಕಾರಣದಿಂದ ಐರ್ಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ನಡುವಿನ ಸರಣಿ ಮಿಸ್ ಮಾಡಿಕೊಂಡಿದ್ದ ದೀಪಕ್ ಚಹಾರ್ ಇದೀಗ ಸಂಪೂರ್ಣ ಫಿಟ್ ಆಗಿದ್ದು, ತಂಡ ಸೇರಿಕೊಂಡಿದ್ದಾರೆ. ವಾಶಿಂಗ್ಟನ್ ಸುಂದರ್ ಕೂಡ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. 

ನಾವು 190 ಬಾರಿಸುತ್ತೇವೆ ಅಂದುಕೊಂಡಿರಲಿಲ್ಲ: ರೋಹಿತ್ ಶರ್ಮಾ ಹೀಗಂದಿದ್ದೇಕೆ?

ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾ
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ , ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್.

ಸದ್ಯ ವಿಂಡೀಸ್ ಪ್ರವಾಸದಲ್ಲಿರುವ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಅರ್ಶದೀಪ್ ಸಿಂಗ್ ಹಾಗೂ ಯಜುವೇಂದ್ರ ಚಹಾಲ್‌ಗೆ ವಿಶ್ರಾಂತಿ ನೀಡಲಾಗಿದೆ. ಹಿರಿಯ ಹಾಗೂ ಪ್ರಮುಖ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡುವ ಮೂಲಕ ಬಿಸಿಸಿಐ ಹಲವು ಪ್ರಯೋಗ ಮಾಡುತ್ತಿದೆ. ಆಗಸ್ಟ್ 27 ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಹೀಗಾಗಿ ಬಿಸಿಸಿಐ ಪ್ರಯೋಗದ ಮೂಲಕ ಬಲಿಷ್ಠ ಟೀಂ ಇಂಡಿಯಾ ಆಯ್ಕೆ ಮಾಡಲು ಮುಂದಾಗಿದೆ. 

WI vs IND ಮೊದಲ ಟಿ20ಯಲ್ಲಿ ಭಾರತ ಶುಭಾರಂಭ, ವಿಂಡೀಸ್ ವಿರುದ್ಧ 68 ರನ್ ಗೆಲುವು

ಜಿಂಬಾಬ್ವೆ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ಹರಾರೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 3 ಏಕದಿನ ಪಂದ್ಯ ಆಡಲಿದೆ. ಆಗಸ್ಟ್ 18, 20, 22 ರಂದು ಪಂದ್ಯ ಆಯೋಜಿಸಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ 3-0 ಅಂತರದಲ್ಲಿ ಏಕದಿನ ಸರಣಿ ಕ್ವೀನ್ ಸ್ವೀಪ್ ಮಾಡಿಕೊಂಡಿತ್ತು. ಯುವ ಆಟಗಾರರ ತಂಡ ಹೊಸ ಇತಿಹಾಸ ರಚಿಸಿತ್ತು. ಇದೀಗ ಧವನ್ ಸೈನ್ಯ ಜಿಂಬಾಬ್ವೆಯಲ್ಲಿ ಮತ್ತೊಂದು ಇತಿಹಾಸ ರಚಿಸಲು ಮುಂದಾಗಿದೆ.