ಕಟಕ್[ಡಿ.22]: ಬ್ಯಾಟ್ಸ್’ಮನ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್ ಕಳೆದುಕೊಂಡು 315 ರನ್ ಬಾರಿಸಿದ್ದು, ಭಾರತಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ. 

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿಂಡೀಸ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಲೆವಿಸ್-ಹೋಪ್ ಜೋಡಿ 57 ರನ್’ಗಳ ಜತೆಯಾಟವಾಡಿತು. ಈ ಜೋಡಿಯನ್ನು ರವೀಂದ್ರ ಜಡೇಜಾ ಬೇರ್ಪಡಿಸಿದರು. ಲೆವಿಸ್ 21 ರನ್ ಬಾರಿಸಿದರು. ಇನ್ನು ಹೋಪ್ 42 ರನ್ ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಶಿಮ್ರೊನ್ ಹೆಟ್ಮೇಯರ್ 37 ರನ್ ಬಾರಿಸಿ ನವದೀಪ್ ಸೈನಿಗೆ ಚೊಚ್ಚಲ ಬಲಿಯಾದರು. ರೋಸ್ಟನ್ ಚೇಸ್ ಆಟ 38 ರನ್’ಗಳಿಗೆ ಸೀಮಿತವಾಯಿತು.

ವಿಕೆಟ್‌ ಪಡೆದ ಖುಷಿಯಲ್ಲಿ ಪಲ್ಟಿ ಹೊಡೆದ ಬೌಲರ್‌!

ಆಸರೆಯಾದ ಪೂರನ್-ಪೊಲ್ಲಾರ್ಡ್: ಒಂದು ಹಂತದಲ್ಲಿ 144 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿಂಡೀಸ್’ಗೆ ನಾಯಕ ಪೊಲ್ಲಾರ್ಡ್ ಹಾಗೂ ನಿಕೋಲಸ್ ಪೂರನ್ ಆಸರೆಯಾದರು. ಈ ಜೋಡಿ ಶತಕದ ಜತೆಯಾಟವಾಡುವ ತಂಡವನ್ನು 270ರ ಗಡಿ ದಾಟಿಸಿದರು. ಪೂರನ್ 64 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 89 ರನ್ ಸಿಡಿಸಿದರು. ಇನ್ನು ನಾಯಕ ಪೊಲ್ಲಾರ್ಡ್ 51 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 74 ರನ್ ಬಾರಿಸಿದರು.

ಭಾರತ ಪರ ನವದೀಪ್ ಸೈನಿ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ, ಶಾರ್ದುಲ್ ಠಾಕೂರ್, ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ವೆಸ್ಟ್ ಇಂಡೀಸ್: 315/5
ನಿಕೋಲಸ್ ಪೂರನ್: 89
ನವದೀಪ್ ಸೈನಿ: 58/2

[ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]