ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣವು ಭಾರತ-ವೆಸ್ಟ್ ಇಂಡೀಸ್ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಪಂದ್ಯದ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯು ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ಟಿಕೆಟ್ ಹೊಂದಿರುವ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು: 2025ರ ಜೂ.4ರಂದು ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಭೀಕರ ಕಾಲ್ತುಳಿದ ಬಳಿಕ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಈಗ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಅ.17ರ ಶನಿವಾರ ಇಲ್ಲಿ ಭಾರತ-ವೆಸ್ಟ್ಇಂಡೀಸ್ 5ನೇ ಟಿ20 ಪಂದ್ಯ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಚಿಸಿರುವ ಉನ್ನತ ತಜ್ಞರ ಸಮಿತಿ ಮಂಗಳವಾರ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ಜಿಬಿಎ ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕ್ರೀಡಾ ಇಲಾಖೆ, ಪೊಲೀಸ್‌, ಆರೋಗ್ಯ, ಅಗ್ನಿಶಾಮಕ, ಬೆಸ್ಕಾಂ, ಲೋಕೋಪಯೋಗಿ ಇಲಾಖೆ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಿದ್ಧತೆಯನ್ನು ಅವಲೋಕಿಸಿದರು. ಕ್ರೀಡಾಂಗಣದಲ್ಲಿ ಭದ್ರತೆ, ಪ್ರವೇಶ, ನಿರ್ಗಮನ, ಜನಸಂದಣಿ ನಿರ್ವಹಣೆ, ಸಿಸಿಟಿವಿ, ಅಗ್ನಿ ಸುರಕ್ಷತೆ ಸೇರಿ ಪ್ರಮುಖ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಮೆಟ್ರೋ ಉಚಿತ

ಪಂದ್ಯದ ಟಿಕೆಟ್‌ ಹೊಂದಿರುವವರು ಪಂದ್ಯದ ದಿನ ಕ್ರೀಡಾಂಗಣಕ್ಕೆ ಆಗಮಿಸಲು ಮತ್ತು ಕ್ರೀಡಾಂಗಣದಿಂದ ಹೊರಡಲು ಉಚಿತವಾಗಿ ಮೆಟ್ರೋ ಬಳಸಬಹುದಾಗಿದೆ. ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೂ ಇದೆ ಎಂದು ಕೆಎಸ್‌ಸಿಎ ತಿಳಿಸಿದೆ.

ಇಂದು ಭಾರತಕ್ಕೆ 4ನೇ ಟಿ20

ಹೈದರಾಬಾದ್‌: ಭಾರತ ಹಾಗೂ ವೆಸ್ಟ್‌ಇಂಡೀಸ್‌ ನಡುವಿನ 4ನೇ ಟಿ20 ಪಂದ್ಯ ಬುಧವಾರ ನಡೆಯಲಿದೆ. ಈಗಾಗಲೇ 2-1 ಮುನ್ನಡೆಯಲ್ಲಿರುವ ಭಾರತ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ವಿಂಡೀಸ್‌ ತಂಡ ಸರಣಿ ಸಮಬಲಕ್ಕೆ ಹೋರಾಡಲಿದೆ. ಸರಣಿ ಆರಂಭಿಕ 3 ಪಂದ್ಯಗಳಂತೆ ಹೈದರಾಬಾದ್ ಪಂದ್ಯ ಕೂಡಾ ಹೈಸ್ಕೋರಿಂಗ್‌ ಪಂದ್ಯವಾಗುವ ಸಾಧ್ಯತೆಯಿದೆ. ಭಾರತ ತಂಡ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದು, ಬೌಲಿಂಗ್‌ ವಿಭಾಗ ಇನ್ನಷ್ಟು ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ