ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾ

ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಮುಗ್ಗರಿಸಿರುವ ವಿರಾಟ್ ಪಡೆ ಇದೀಗ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

India vs West Indies 2nd ODI Must win game for Team India

ವಿಶಾಖಪಟ್ಟಣಂ[ಡಿ.18]: ತವರಿನ ಸರಣಿಗಳಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಮೆರೆದಿದ್ದೇ ಹೆಚ್ಚು. ಆದರೆ ವಿಂಡೀಸ್‌ ವಿರುದ್ಧದ ಏಕದಿನ ಸರಣಿಯ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದೆ. ಬುಧವಾರ ಇಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನ್ನುವಂತಾಗಿದ್ದು, ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡ ಕೊಹ್ಲಿ ಪಡೆ, ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದೇ ಕರೆಸಿಕೊಳ್ಳುವ ಇಲ್ಲಿನ ಆಂಧ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ವಿಂಡೀಸ್‌ ಬ್ಯಾಟಿಂಗ್‌ ದೈತ್ಯರನ್ನು ಕಟ್ಟಿಹಾಕಬೇಕಿದ್ದರೆ ಭಾರತ ತನ್ನ ಬೌಲಿಂಗ್‌ ಸಂಯೋಜನೆಯನ್ನು ಸರಿಪಡಿಸಿಕೊಳ್ಳಬೇಕು. ಭಾರತ ವಿರುದ್ಧ ಸತತ 9 ಸರಣಿಗಳನ್ನು ಸೋತಿರುವ ವಿಂಡೀಸ್‌, ಈ ಪಂದ್ಯದಲ್ಲಿ ಜಯಿಸಿದರೆ ಅವಿಸ್ಮರಣೀಯ ಸರಣಿ ಗೆಲುವು ದೊರೆಯಲಿದೆ. ಜತೆಗೆ ನಾಯಕ ಕೀರನ್‌ ಪೊಲ್ಲಾರ್ಡ್‌ಗೆ ಬೇಡಿಕೆ ಹೆಚ್ಚಲಿದೆ. ತಜ್ಞ ಟಿ20 ಆಟಗಾರ ಎಂದೇ ಗುರುತಿಸಿಕೊಂಡಿರುವ ಪೊಲ್ಲಾರ್ಡ್‌ಗೆ ತಾವೊಬ್ಬ ಸಮರ್ಥ ನಾಯಕ ಎನ್ನುವುದನ್ನು ಸಾಬೀತುಪಡಿಸಲು ಅವಕಾಶವಿದೆ.

ಗೆಲ್ಲಲೇಬೇಕಾದ 2ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ ಪ್ರಕಟ

ಚಹಲ್‌ ಕಣಕ್ಕೆ?: ಚೆನ್ನೈನ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡಿದರೂ, ಕುಲ್ದೀಪ್‌ ಯಾದವ್‌ ಹಾಗೂ ರವೀಂದ್ರ ಜಡೇಜಾ ವಿಕೆಟ್‌ ಕೀಳುವಲ್ಲಿ ವಿಫಲರಾಗಿದ್ದರು. ಈ ಪಂದ್ಯದಲ್ಲಿ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ರನ್ನು ಆಡಿಸುವ ಸಾಧ್ಯತೆ ಇದೆ. ಶಿವಂ ದುಬೆ ಪರಿಣಾಮಕಾರಿ ಬೌಲರ್‌ ಎನಿಸಿಲ್ಲ. ಕೇದಾರ್‌ ಜಾಧವ್‌ಗೆ ಕಳೆದ ಪಂದ್ಯದಲ್ಲಿ ಕೇವಲ ಒಂದು ಓವರ್‌ ನೀಡಲಾಯಿತು. ಇದೇ ಕಾರಣಕ್ಕೆ ಮೊದಲ ಏಕದಿನದಲ್ಲಿ ಕೊಹ್ಲಿ, ಡೆತ್‌ ಓವರ್‌ಗಳು ಆರಂಭಗೊಳ್ಳುವ ಮೊದಲೇ ಶಮಿ ಹಾಗೂ ಚಹರ್‌ರ ಸ್ಪೆಲ್‌ಗಳನ್ನು ಪೂರ್ಣಗೊಳಿಸಬೇಕಾಯಿತು. ಹೀಗಾಗಿ ದುಬೆ ಕೊನೆ ಓವರ್‌ಗಳನ್ನು ಬೌಲ್‌ ಮಾಡುವ ದೊಡ್ಡ ಜವಾಬ್ದಾರಿ ವಹಿಸಿಕೊಂಡರು. ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ವಿಜಯ್‌ ಶಂಕರ್‌ ಹಲವು ಬಾರಿ ಡೆತ್‌ ಓವರ್‌ಗಳನ್ನು ಬೌಲ್‌ ಮಾಡಿದ್ದರು.

ಬ್ಯಾಟಿಂಗ್‌ ವಿಭಾಗದಲ್ಲಿ ಹೆಚ್ಚಿನ ಸಮಸ್ಯೆ ಏನು ಇಲ್ಲ. ರೋಹಿತ್‌ ಶರ್ಮಾ ಇಲ್ಲವೇ ವಿರಾಟ್‌ ಕೊಹ್ಲಿ ಇಬ್ಬರಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್‌ ಆಡಿದರೆ ವಿಂಡೀಸ್‌ಗೆ ಸಮಸ್ಯೆ ಎದುರಾಗಲಿದೆ. ಶ್ರೇಯಸ್‌ ಅಯ್ಯರ್‌ ಸ್ಥಿರತೆ ಉಳಿಸಿಕೊಂಡಿದ್ದು, ರಿಷಭ್‌ ಪಂತ್‌ ಜವಾಬ್ದಾರಿ ಅರಿತಿರುವುದಾಗಿ ಹೇಳಿದ್ದಾರೆ. ಉತ್ತಮ ಆಟದೊಂದಿಗೆ ಖಾಯಂ ಸ್ಥಾನ ಪಡೆಯಲು ಕೆ.ಎಲ್‌.ರಾಹುಲ್‌ಗೆ ಮತ್ತೊಂದು ಅವಕಾಶ ದೊರೆತಿದೆ.

ಆತ್ಮವಿಶ್ವಾಸದಲ್ಲಿ ವಿಂಡೀಸ್‌: ಭಾರತಕ್ಕೆ ಹೋಲಿಸಿದರೆ ವಿಂಡೀಸ್‌ ತಂಡ ಸಮತೋಲನದಿಂದ ಕೂಡಿದೆ. ನಾಯಕ ಪೊಲ್ಲಾರ್ಡ್‌ ಮುಂದೆ 7 ಬೌಲಿಂಗ್‌ ಆಯ್ಕೆಗಳಿವೆ. ಅಗ್ರ 4 ಬ್ಯಾಟ್ಸ್‌ಮನ್‌ ಗಳು ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲೂ ತಂಡದ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಸಂಘಟಿತ ಪ್ರದರ್ಶನದ ಮೂಲಕ ವಿಂಡೀಸ್‌ ಮತ್ತೊಮ್ಮೆ ಭಾರತಕ್ಕೆ ಆಘಾತ ನೀಡಿದರೆ ಅಚ್ಚರಿಯಿಲ್ಲ.

ಪಿಚ್‌ ರಿಪೋರ್ಟ್‌

ಇಲ್ಲಿನ ಆಂಧ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಆಗಿದ್ದು, ರನ್‌ ಹೊಳೆ ನಿರೀಕ್ಷೆ ಮಾಡಲಾಗಿದೆ. ಮೊದಲು ಬ್ಯಾಟ್‌ ಮಾಡುವ ತಂಡ ಸುಲಭವಾಗಿ 300ಕ್ಕೂ ಹೆಚ್ಚು ರನ್‌ ಕಲೆಹಾಕಬಹುದು ಎಂದು ನಿರೀಕ್ಷಿಸಲಾಗಿದೆ. ಇಲ್ಲಿ ನಡೆದಿರುವ ಕಳೆದ 6 ಏಕದಿನ ಪಂದ್ಯಗಳ ಪೈಕಿ ಕೇವಲ 1ರಲ್ಲಿ ಮಾತ್ರ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ಕೇದಾರ್‌ ಜಾಧವ್‌, ರಿಷಭ್‌ ಪಂತ್‌, ಶಿವಂ ದುಬೆ, ಜಡೇಜಾ/ಚಹಲ್‌, ದೀಪಕ್‌ ಚಹರ್‌, ಕುಲ್ದೀಪ್‌ ಯಾದವ್‌, ಮೊಹಮದ್‌ ಶಮಿ.

ವಿಂಡೀಸ್‌: ಶಾಯ್‌ ಹೋಪ್‌, ಲೆವಿಸ್‌/ಆ್ಯಂಬ್ರಿಸ್‌, ಶಿಮ್ರನ್‌ ಹೆಟ್ಮೇಯರ್‌, ನಿಕೋಲಸ್‌ ಪೂರನ್‌, ರೋಸ್ಟನ್‌ ಚೇಸ್‌, ಕೀರನ್‌ ಪೊಲ್ಲಾರ್ಡ್‌, ಜೇಸನ್‌ ಹೋಲ್ಡರ್‌, ಕೀಮೋ ಪೌಲ್‌, ಹೇಡನ್‌ ವಾಲ್ಶ್, ಅಲ್ಜಾರಿ ಜೋಸೆಫ್‌, ಶೆಲ್ಡನ್‌ ಕಾಟ್ರೆಲ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

Latest Videos
Follow Us:
Download App:
  • android
  • ios