ಶ್ರೀಲಂಕಾ ಎದುರು ಸ್ಪೋಟಕ ಶತಕ ಸಿಡಿಸಿದ ವಿರಾಟ್ ಕೊಹ್ಲಿಏಕದಿನ ಕ್ರಿಕೆಟ್‌ನಲ್ಲಿ 46ನೇ ಶತಕ ಸಿಡಿಸಿದ ಮಾಜಿ ನಾಯಕದಾಖಲೆಗಳಿಗಾಗಿ ಆಡೋದಿಲ್ಲವೆಂದ ರನ್ ಮಷೀನ್ ಕೊಹ್ಲಿ
ತಿರುವಂತಪುರಂ(ಜ.16): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಶ್ರೀಲಂಕಾ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭದಿಂದಲೇ ಆಕ್ರಮಣಕಾರಿಯಾಟ ವಾಡಿದ ವಿರಾಟ್ ಕೊಹ್ಲಿ, ವೈಯುಕ್ತಿಕ ಮೈಲಿಗಲ್ಲಿನ ಬಗ್ಗೆ ಹೆಚ್ಚು ಗಮನ ಕೊಡಲು ಹೋಗಲಿಲ್ಲ. ಇನ್ನು ಬೃಹತ್ ಮೊತ್ತ ಕಲೆಹಾಕಿದ ಟೀಂ ಇಂಡಿಯಾ ಬೌಲಿಂಗ್‌ನಲ್ಲಿಯೂ ಮಿಂಚಿನ ದಾಳಿ ನಡೆಸಿತು. ವೇಗಿ ಮೊಹಮ್ಮದ್ ಸಿರಾಜ್ ಪವರ್ ಪ್ಲೇನಲ್ಲೇ ಮಾರಕ ದಾಳಿ ನಡೆಸುವ ಮೂಲಕ ಲಂಕಾ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಪರಿಣಾಮ ಟೀಂ ಇಂಡಿಯಾ, 317 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸುವುದರ ಜತೆಗೆ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿತು. ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಹಾಗೂ ಸರಣಿಯಲ್ಲಿ ಎರಡು ಶತಕ ಸಿಡಿಸಿದ್ದರಿಂದ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 3 ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ 283 ರನ್ ಕಲೆಹಾಕಿದ್ದಾರೆ.
ತಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, ನನಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನನ್ನ ಪ್ರಕಾರ, ನಾನು ಯಾವ ರೀತಿ ಪ್ರದರ್ಶನ ತೋರುತ್ತೇನೋ ಅದರ ಫಲಿತಾಂಶ ಇದಾಗಿರುತ್ತದೆ. ನಾನು ತಂಡಕ್ಕಾಗಿ ಎಷ್ಟು ದೀರ್ಘವೋ ಅಷ್ಟು ಕಾಲ ಆಡಲು ಬಯಸುತ್ತೇನೆ. ನಾನು ಯಾವಾಗಲೂ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡೇ, ತಂಡಕ್ಕೆ ಎಷ್ಟು ಸಾಧ್ಯವೋ ಅಷ್ಟು ನೆರವಾಗಲು ಬಯಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಏಕದಿನ ಗರಿಷ್ಠ ರನ್: ಟಾಪ್-5ಗೆ ವಿರಾಟ್ ಕೊಹ್ಲಿ ಲಗ್ಗೆ! ಜನವರಿ 15 ಸ್ಮರಣೀಯವಾಗಿಸಿಕೊಂಡ King Kohli
ನಾನು ದೀರ್ಘ ಬಿಡುವಿನ ಬಳಿಕ ತಂಡ ಕೂಡಿಕೊಂಡ ಮೇಲೆ ನನಗೆ ಸಾಕಷ್ಟು ಉತ್ತಮವಾದ ಅನುಭವವಾಗುತ್ತಿದೆ. ನಾನು ದಾಖಲೆಗಳನ್ನು ನಿರ್ಮಿಸಲೇಬೇಕು ಎಂದು ಆಡುವುದಿಲ್ಲ. ನಾನು ನನ್ನ ಬ್ಯಾಟಿಂಗ್ ಎಂಜಾಯ್ ಮಾಡುತ್ತೇನೆ. ಇದೇ ರೀತಿಯ ಆಟವನ್ನು ಮುಂದುವರೆಸಿಕೊಂಡು ಹೋಗಲು ನೋಡುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿ, ಲಂಕಾ ಎದುರಿನ ಪಂದ್ಯ ಮುಕ್ತಾಯದ ಬಳಿಕ ಹೇಳಿದರು.
ತಂಡವೊಂದರ ವಿರುದ್ಧ 10 ಶತಕ: ಮೊದಲಿಗ!
ತಿರುವನಂತಪುರಂನಲ್ಲಿ ದಾಖಲಾದ ಶತಕ ಶ್ರೀಲಂಕಾ ವಿರುದ್ಧ ಕೊಹ್ಲಿಯ 10ನೇ ಏಕದಿನ ಶತಕ. ತಂಡವೊಂದರ ವಿರುದ್ಧ ಏಕದಿನದಲ್ಲಿ 10 ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಕೊಹ್ಲಿಯೇ ವಿಂಡೀಸ್ ವಿರುದ್ಧ 9 ಶತಕ ಹೊಡೆದಿದ್ದು, ಆಸೀಸ್ ವಿರುದ್ಧ ಸಚಿನ್ 9 ಶತಕ ಗಳಿಸಿದ್ದಾರೆ.
ತವರಲ್ಲಿ 21 ಶತಕ: ಕೊಹ್ಲಿ ಹೊಸ ದಾಖಲೆ!
ತವರಿನಲ್ಲಿ ವಿರಾಟ್ ಏಕದಿನದಲ್ಲಿ 21 ಶತಕ ಬಾರಿಸಿದ್ದು, ಸಚಿನ್ ತೆಂಡುಲ್ಕರ್‌ರ ದಾಖಲೆ ಮುರಿದಿದ್ದಾರೆ. ಸಚಿನ್ ತವರಲ್ಲಿ 20 ಶತಕ ಸಿಡಿಸಿದ್ದರು. ಅಲ್ಲದೇ ಕೊಹ್ಲಿ ಶತಕ ಬಾರಿಸಿದಾಗ ಭಾರತ 38 ಬಾರಿ ಗೆದ್ದಿದೆ. ಇದೂ ಸಹ ದಾಖಲೆ ಎನಿಸಿದೆ.
ಭಾರತ ರನ್ ಹಬ್ಬ!: ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ಭಾರತದ ನಿರ್ಧಾರ ಸರಿಯಿತ್ತು. ಮೊದಲ ವಿಕೆಟ್‌ಗೆ ರೋಹಿತ್(42) ಹಾಗೂ ಗಿಲ್ 95 ರನ್ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟರು. ಗಿಲ್ ಹಾಗೂ ಕೊಹ್ಲಿ ನಡುವೆ 2ನೇ ವಿಕೆಟ್‌ಗೆ 131 ರನ್ ಜೊತೆಯಾಟ ಮೂಡಿಬಂತು. ಏಕದಿನದಲ್ಲಿ 2ನೇ, ತವರಿನಲ್ಲಿ ಮೊದಲ ಶತಕ ಬಾರಿಸಿದ ಗಿಲ್ 97 ಎಸೆತದಲ್ಲಿ 116 ರನ್ ಗಳಿಸಿ ಔಟಾದರು. ಆ ನಂತರ ಕೊಹ್ಲಿಯ ಅಬ್ಬರ ಶುರುವಾಯಿತು. ಏಕದಿನದಲ್ಲಿ 46ನೇ ಶತಕ ಸಿಡಿಸಿದ ಕೊಹ್ಲಿ, 110 ಎಸೆತದಲ್ಲಿ 13 ಬೌಂಡರಿ, 8 ಸಿಕ್ಸರ್‌ನೊಂದಿಗೆ ಔಟಾಗದೆ 166 ರನ್ ಚಚ್ಚಿ ಭಾರತ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಶ್ರೇಯಸ್ ಅಯ್ಯರ್ 38 ರನ್ ಕೊಡುಗೆ ನೀಡಿದರು.
ಸಿರಾಜ್ ‘ಬೆಂಕಿ’ ಬೌಲಿಂಗ್: ಬೃಹತ್ ಗುರಿ ಬೆನ್ನತ್ತಲು ಇಳಿದ ಲಂಕಾಕ್ಕೆ ಆರಂಭದಲ್ಲೇ ಮೊಹಮದ್ ಸಿರಾಜ್ ಕಂಟಕರಾದರು. ಶಮಿ, ಕುಲ್ದೀಪ್‌ರಿಂದಲೂ ಉತ್ತಮ ಬೌಲಿಂಗ್ ಪ್ರದರ್ಶನ ಮೂಡಿಬಂತು. 51 ರನ್‌ಗೆ 8 ವಿಕೆಟ್ ಕಳೆದುಕೊಂಡಿದ್ದ ಲಂಕಾ, 9 ವಿಕೆಟ್‌ಗೆ 22 ರನ್ ಜೊತೆಯಾಟ ಪಡೆಯಿತು. ಗಾಯಾಳು ಭಂಡಾರ ಕ್ರೀಸ್‌ಗಿಳಿಯಲಿಲ್ಲ. 22 ಓವರಲ್ಲಿ ಲಂಕಾ ಇನ್ನಿಂಗ್‌್ಸ ಮುಕ್ತಾಯಗೊಳಿಸಿ ಅತಿದೊಡ್ಡ ಸೋಲಿಗೆ ತುತ್ತಾಯಿತು.
