* ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ* ಲಂಕಾ ಪಾಳಯದಲ್ಲಿ ಕೋವಿಡ್‌ ಪ್ರಕರಣಗಳು ಮತ್ತೆಯಾದ ಬೆನ್ನಲ್ಲೇ ಹೊಸ ವೇಳಾಪಟ್ಟಿ ರೆಡಿ* ಇಂಡೋ-ಲಂಕಾ ಸೀಮಿತ ಓವರ್‌ಗಳ ಸರಣಿಯು ಜುಲೈ 18ರಿಂದ ಆರಂಭ

ಕೊಲಂಬೊ(ಜು.10): ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಕೋವಿಡ್‌ ವಕ್ರದೃಷ್ಟಿ ಬೀರಿದ್ದು, ಲಂಕಾ ತಂಡದ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ 19 ದೃಢಪಟ್ಟ ಬೆನ್ನಲ್ಲೇ ಜುಲೈ 13ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ಕೆಲದಿನಗಳ ಮಟ್ಟಿಗೆ ಮುಂದೂಡಲಾಗಿದೆ. ಇದೀಗ ಅಧಿಕೃತ ವೇಳಾಪಟ್ಟಿ ವೇಳಾಪಟ್ಟಿ ಹೊರಬಿದ್ದಿದ್ದು, ಜುಲೈ 18ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ವಾಪಾಸಾದ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್‌ ಕೋಚ್ ಗ್ರ್ಯಾಂಟ್ ಫ್ಲವರ್, ಟೀಂ ಅನಾಲಿಸ್ಟ್‌ ಜಿ.ಟಿ. ನಿರ್ಶೋನ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪಿಸಿಆರ್ ಟೆಸ್ಟ್ ಮೂಲಕ ದೃಢಪಟ್ಟಿತ್ತು. ಹೀಗಾಗಿ ಈ ಮೊದಲೇ ನಿಗದಿಯಾಗಿದ್ದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಟೀಂ ಇಂಡಿಯಾ ವಿರುದ್ದದ ಎರಡು ಹಾಗೂ ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 20 ಹಾಗೂ 23ರಂದು ನಡೆಯಲಿದೆ.

Scroll to load tweet…

ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ಎರಡು ಈ ಕುರಿತಂತೆ ಚರ್ಚಿಸಿ ಒಮ್ಮತದೊಂದಿಗೆ ವೇಳಾಪಟ್ಟಿ ಪರಿಷ್ಕರಿಸುವ ತೀರ್ಮಾನಕ್ಕೆ ಬಂದಿವೆ. ಈ ಮೊದಲು ಜುಲೈ 13ರ ಬದಲಿಗೆ ಜುಲೈ 17ರಿಂದ ಸೀಮಿತ ಓವರ್‌ಗಳ ಸರಣಿ ಆರಂಭವಾಗಲಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. 

Scroll to load tweet…

ಕೊರೋನಾ ಆರ್ಭಟ; ಇಂಡಿಯಾ VS ಲಂಕಾ ಏಕದಿನ ವೇಳಾಪಟ್ಟಿ ಬದಲು

ಇನ್ನು ಇದೇ ವೇಳೆ ಟಿ20 ಸರಣಿಯ ವೇಳಾಪಟ್ಟಿ ಕೂಡಾ ಬದಲಾಗಿದ್ದು, ಮೂರು ಪಂದ್ಯಗಳ ಟಿ20 ಸರಣಿಯು ಕ್ರಮವಾಗಿ ಜುಲೈ 25, 27 ಹಾಗೂ 29ರಂದು ನಡೆಯಲಿದೆ. ಏಕದಿನ ಹಾಗೂ ಟಿ20 ಸರಣಿಯ ಪಂದ್ಯಗಳು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. 

ಕ್ವಾರಂಟೈನ್‌ ಅವಧಿ ಮುಗಿಯುತ್ತಿದ್ದಂತೆಯೇ ನೇರವಾಗಿ ಕ್ರಿಕೆಟ್‌ ಮೈದಾನಕ್ಕಿಳಿಯುವುದು ಅಸಾಧ್ಯವಾದ ಮಾತು. ಈ ಕಾರಣಕ್ಕಾಗಿಯೇ ಸೀಮಿತ ಓವರ್‌ಗಳ ಸರಣಿಯನ್ನು 4 ದಿನಗಳ ಕಾಲ ಮುಂದೂಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಸಮಿತಿಯ ಮುಖ್ಯಸ್ಥ ಅರ್ಜುನ ಡಿ ಸಿಲ್ವಾ ತಿಳಿಸಿದ್ದಾರೆ. ಗ್ರ್ಯಾಂಟ್‌ ಫ್ಲವರ್‌ಗೆ ಡೆಲ್ಟಾ ರೂಪಾಂತರಿ ವೈರಸ್ ತಗುಲಿದೆ ಎನ್ನುವ ಮಾಧ್ಯಮಗಳ ವರದಿಯ ಕುರಿತಂತೆ ಪ್ರತಿಕ್ರಿಯಿಸಿದ ಅರ್ಜುನ ಡಿ ಸಿಲ್ವಾ, ಈ ಕುರಿತಂತೆ ನಮಗೆ ಸ್ಪಷ್ಟವಾದ ವರದಿ ಸಿಕ್ಕಿಲ್ಲ. ಹೀಗಾಗಿ ಈ ಕುರಿತಂತೆ ವಿಚಾರ ಖಚಿತವಾಗದೇ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.