ಇಂದೋರ್‌ನಲ್ಲಿಂದು ಭಾರತ-ಲಂಕಾ ಫೈಟ್‌

ಭಾರತ-ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಇಂದೋರ್‌ನ ಹೋಳ್ಕರ್ ಮೈದಾನ ಆತಿಥ್ಯ ವಹಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಎರಡನೇ ಪಂದ್ಯ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

India vs Sri Lanka 2nd T20I Can inexperienced Sri Lanka go past Team India

ಇಂದೋರ್‌(ಜ.07): ಐಸಿಸಿ ಟಿ20 ವಿಶ್ವಕಪ್‌ಗೆ ಸಿದ್ಧತೆ ತೀವ್ರಗೊಳಿಸುವ ಉದ್ದೇಶದಿಂದ ಗುವಾಹಟಿಗೆ ತೆರಳಿದ್ದ ಭಾರತ ತಂಡಕ್ಕೆ ನಿರಾಸೆ ಉಂಟಾಯಿತು. ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾದ ಕಾರಣ, 2020ರಲ್ಲಿ ಗೆಲುವಿನ ಆರಂಭ ಪಡೆದುಕೊಳ್ಳಲು ಭಾರತ ಇಂದೋರ್‌ ಪಂದ್ಯದ ವರೆಗೂ ಕಾಯಬೇಕಿದೆ. ಮಂಗಳವಾರ ಇಲ್ಲಿನ ಹೋಲ್ಕರ್‌ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯ ನಡೆಯಲಿದ್ದು, ವಿರಾಟ್‌ ಕೊಹ್ಲಿ ಪಡೆ ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿದೆ.

ತಡವಾಗಿ ಆರಂಭವಾಗತ್ತೆ ಮೊದಲ ಟಿ20 ಪಂದ್ಯ..!

ಮೊದಲ ಪಂದ್ಯ ಮಳೆಗೆ ಬಲಿಯಾದ ಕಾರಣ, ತಂಡಕ್ಕಿಂತ ಹೆಚ್ಚಾಗಿ ನಷ್ಟವಾಗಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ಗೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಧವನ್‌, ತಮ್ಮಲ್ಲಿನ್ನೂ ಕ್ರಿಕೆಟ್‌ ಬಾಕಿ ಇದೆ ಎನ್ನುವುದನ್ನು ಈ ಸರಣಿಯಲ್ಲಿ ಸಾಬೀತು ಪಡಿಸಬೇಕಿದೆ. ಕೆ.ಎಲ್‌.ರಾಹುಲ್‌ ಜತೆ ಪೈಪೋಟಿ ನಡೆಸಲಿರುವ ಧವನ್‌ಗೆ ಇನ್ನೆರಡು ಪಂದ್ಯಗಳು ಮಾತ್ರ ಸಿಗಲಿವೆ.

34 ವರ್ಷದ ಧವನ್‌ ಭಾರತ ತಂಡದ ಯಶಸ್ವಿ ಆರಂಭಿಕ ಎನಿಸಿದರೂ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡಿರುವ ಬಿಸಿಸಿಐ ಆಯ್ಕೆ ಸಮಿತಿಗೆ 27 ವರ್ಷದ ಕೆ.ಎಲ್‌.ರಾಹುಲ್‌ ಸೂಕ್ತ ಆಯ್ಕೆ ಎನಿಸುತ್ತಿದೆ. ಟಿ20 ಕ್ರಿಕೆಟ್‌ನಲ್ಲಿ ಧವನ್‌ರ ಸ್ಟ್ರೈಕ್ರೇಟ್‌ ಬಗ್ಗೆ ತಂಡದ ಆಡಳಿತಕ್ಕೆ ಅಸಮಾಧಾನವಿದೆ. ಲಂಕಾ ವಿರುದ್ಧದ ಕೊನೆ 2 ಪಂದ್ಯಗಳಲ್ಲಿ ಧವನ್‌ ಸ್ಫೋಟಕ ಆಟದ ಜತೆಗೆ ದೊಡ್ಡ ಇನ್ನಿಂಗ್ಸ್‌ ಸಹ ಕಟ್ಟಬೇಕಿದೆ.

ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ..ಬಡ ಬಿಸಿಸಿಐಗೆ ಇಂಥಾ ದುಸ್ಥಿತಿ ಬರಬಾರ್ದಿತ್ತು!

ಮತ್ತೊಂದೆಡೆ ರಾಹುಲ್‌ ಸಿಕ್ಕಿರುವ ಎಲ್ಲಾ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಟಿ20 ವಿಶ್ವಕಪ್‌ ತಂಡದಲ್ಲೂ ರೋಹಿತ್‌ ಶರ್ಮಾ ಹಾಗೂ ರಾಹುಲ್‌ ಮೊದಲ ಆಯ್ಕೆಯ ಆರಂಭಿಕರಾಗಿರಲಿದ್ದಾರೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ನಾಯಕ ವಿರಾಟ್‌ ಕೊಹ್ಲಿ ಸಹ ಧವನ್‌ ಹಾಗೂ ರಾಹುಲ್‌ ನಡುವೆ ಇರುವ ಪೈಪೋಟಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ರೋಹಿತ್‌ ವಾಪಸಾದ ಬಳಿಕ ಆಯ್ಕೆ ಗೊಂದಲ ಎದುರಾಗಲಿದೆ. ಶಿಖರ್‌ ಅನುಭವಿ ಆಟಗಾರ. ರಾಹುಲ್‌ ಸಹ ಉತ್ತಮವಾಗಿ ಆಡುತ್ತಿದ್ದಾರೆ. ತಂಡಕ್ಕೆ ಯಾವ ಸಂಯೋಜನೆ ಉತ್ತಮ ಎನ್ನುವುದನ್ನು ಗಮನದಲ್ಲಿಟ್ಟುಕೊಂಡ ಅಂತಿಮ ಹನ್ನೊಂದರ ಬಳಗವನ್ನು ಆಯ್ಕೆ ಮಾಡಬೇಕಾಗುತ್ತದೆ’ ಎಂದು ಕೊಹ್ಲಿ ಹೇಳಿದ್ದಾರೆ.

ತಂಡದಲಿಲ್ಲ ಬದಲಾವಣೆ?: ಗುವಾಹಟಿ ಪಂದ್ಯ ಒಂದೂ ಎಸೆತ ಕಾಣದೆ ರದ್ದಾದ ಕಾರಣ, ತಂಡದ ಆಡುವ ಹನ್ನೊಂದರ ಬಳಗದಲ್ಲಿ ನಾಯಕ ಕೊಹ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ತಂಡಕ್ಕೆ ವಾಪಸಾಗಿರುವ ವೇಗಿ ಜಸ್‌ಪ್ರೀತ್‌ ಬುಮ್ರಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಮ್ಯಾಥ್ಯೂಸ್‌ ಕಣಕ್ಕೆ?: ಮೊದಲ ಟಿ20ಗೆ ಲಂಕಾ ತಂಡ ಅನುಭವಿ ಆಲ್ರೌಂಡರ್‌ ಮ್ಯಾಥ್ಯೂರನ್ನು ಕೈಬಿಟ್ಟಿತ್ತು. ಈ ಪಂದ್ಯದಲ್ಲಿ ಅವರನ್ನು ಆಡಿಸುವ ಸಾಧ್ಯತೆ ಇದೆ. ಗುವಾಹಟಿಯಲ್ಲಿ ಲಂಕಾ ಸಹ ಮೂವರು ವೇಗಿಗಳು, ಇಬ್ಬರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿಕೊಂಡಿತ್ತು. ಮಂಗಳವಾರದ ಪಂದ್ಯದಲ್ಲಿ ತಂಡದ ಸಂಯೋಜನೆ ಹೇಗಿರಲಿದೆ ಎನ್ನುವ ಕುತೂಹಲವಿದೆ.

12 ವರ್ಷಗಳಿಂದ ಲಂಕಾ ತಂಡ ಭಾರತ ವಿರುದ್ಧ ಯಾವುದೇ ಮಾದರಿಯಲ್ಲಿ ದ್ವಿಪಕ್ಷೀಯ ಸರಣಿ ಗೆದ್ದಿಲ್ಲ. ಈ ಪಂದ್ಯ ಗೆದ್ದು ಮುನ್ನಡೆ ಸಾಧಿಸಿದರೆ, ಭಾರತದ ಮೇಲೆ ಖಂಡಿತವಾಗಿಯೂ ಒತ್ತಡ ಹೆಚ್ಚಾಗಲಿದೆ.

ಮನೀಶ್‌ ಪಾಂಡೆ, ಸ್ಯಾಮ್ಸನ್‌ಗೆ ಬೆಂಚ್‌ ಕಾಯವುದೇ ಕೆಲಸ!

ಮನೀಶ್‌ ಪಾಂಡೆ ಹಾಗೂ ಸಂಜು ಸ್ಯಾಮ್ಸನ್‌ರನ್ನು ಬಿಸಿಸಿಐ ಪ್ರತಿ ಸರಣಿಗೂ ಆಯ್ಕೆ ಮಾಡುತ್ತದೆ. ಆದರೆ ಭಾರತ ತಂಡದ ಆಡಳಿತ ಮಾತ್ರ ಆಡುವ ಹನ್ನೊಂದರಲ್ಲಿ ಈ ಇಬ್ಬರು ಪ್ರತಿಭಾನ್ವಿತ ಆಟಗಾರರಿಗೆ ಸ್ಥಾನ ನೀಡುತ್ತಿಲ್ಲ. ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್‌ ನಡೆಯಲಿದ್ದು, ಭಾರತ ತಂಡ ಹಲವು ಪ್ರಯೋಗಗಳನ್ನು ನಡೆಸುತ್ತಿದೆ. ಆದರೆ ಪಾಂಡೆ ಹಾಗೂ ಸಂಜುಗೆ ಮಾತ್ರ ಅವಕಾಶ ನೀಡುತ್ತಿಲ್ಲ. 2019ರಲ್ಲಿ ಮನೀಶ್‌ ಕೇವಲ 4 ಟಿ20 ಪಂದ್ಯಗಳನ್ನು ಆಡಿದರು. ಸ್ಯಾಮ್ಸನ್‌ಗೆ ಅವಕಾಶವೇ ಸಿಗಲಿಲ್ಲ.

ಪಿಚ್‌ ರಿಪೋರ್ಟ್‌

ಹೋಲ್ಕರ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ರನ್‌ ಹೊಳೆ ನಿರೀಕ್ಷೆ ಮಾಡಲಾಗಿದೆ. ಈ ವರೆಗೂ ಇಲ್ಲಿ ಏಕೈಕ ಅಂ.ರಾ.ಟಿ20 ಪಂದ್ಯ ನಡೆದಿದ್ದು, ಭಾರತ ಹಾಗೂ ಶ್ರೀಲಂಕಾ ತಂಡಗಳೇ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ 20 ಓವರಲ್ಲಿ 260 ರನ್‌ ಸಿಡಿಸಿ, 88 ರನ್‌ಗಳ ಗೆಲುವು ಪಡೆದಿತ್ತು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಶಾರ್ದೂಲ್‌ ಠಾಕೂರ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ನವ್‌ದೀಪ್‌ ಸೈನಿ.

ಶ್ರೀಲಂಲಾ: ಆವಿಷ್ಕಾ ಫರ್ನಾಂಡೋ, ಧನುಷ್ಕಾ ಗುಣತಿಲಕ, ಕುಸಾಲ್‌ ಪೆರೇರಾ, ಒಶಾಡ ಫರ್ನಾಂಡೋ, ಭಾನುಕ ರಾಜಪಕ್ಸಾ, ಧನಂಜಯ ಡಿ ಸಿಲ್ವಾ, ದಸುನ್‌ ಶನಕ, ಇಸುರು ಉಡನ, ವನಿಂಡು ಹಸರಂಗ, ಲಹಿರು ಕುಮಾರ, ಲಸಿತ್‌ ಮಾಲಿಂಗ(ನಾಯಕ).

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

Latest Videos
Follow Us:
Download App:
  • android
  • ios