ಗುವಾಹಟಿ[ಜ.05]: ಇಂಡೋ-ಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿದೆ. ವರ್ಷದ ಮೊದಲ ಪಂದ್ಯವೇ ಮಳೆಯಿಂದ ರದ್ದಾಯಿತು.

ಬರ್ಸಾಪುರ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಟಾಸ್ ಮುಗಿದ ಬೆನ್ನಲ್ಲೇ ನಿರಂತರ ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು ಕೆಲಕಾಲ ಮುಂದೂಡಲಾಯಿತು. ಪಿಚ್ ಒದ್ದೆಯಾಗಿದ್ದರಿಂದ ಹೇರ್ ಡ್ರೈಯರ್ ಹಾಗೂ ಐರನ್ ಬಾಕ್ಸ್ ಬಳಸಿ ಒಣಗಿಸಲು ಪ್ರಯತ್ನಿಸಲಾಯಿತು. ಅಂಪೈರ್ ಮತ್ತೊಮ್ಮೆ 9.30ರ ವೇಳೆಗೆ ಪಿಚ್ ಪರಿಶೀಲನೆ ನಡೆಸಿದರು. ಆದರೂ ಔಟ್ ಫೀಲ್ಡ್ ಒದ್ದೆಯಾಗಿದ್ದರಿಂದ ರಿಸ್ಕ್ ತೆಗೆದುಕೊಳ್ಳಲು ಮ್ಯಾಚ್ ರೆಫ್ರಿ ಮುಂದಾಗಲಿಲ್ಲ. ಹೀಗಾಗಿ ಪಂದ್ಯ ರದ್ದು ಮಾಡುವ ತೀರ್ಮಾನಕ್ಕೆ ಬರಲಾಯಿತು.

ಹೇರ್ ಡ್ರೈಯರ್ ಹಾಗೂ ಐರನ್ ಬಾಕ್ಸ್ ಬಳಸಿ ಪಿಚ್ ಒಣಗಿಸಲು ಪ್ರಯತ್ನಿಸಿದ್ದು ಈಗ ಟ್ರೋಲ್ ಗೆ ಆಹಾರವಾಗಿದೆ. ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ಇಂಥ ಸ್ಥಿತಿ ಬರಬಾರದಿತ್ತು , ಪೂವರ್ ಬಿಸಿಸಿಐ ಎಂದು ಸೋಶಿಯಲ್ ಮೀಡಿಯಾ ಹೇಳುತ್ತಿದೆ.

ಅದೆಷ್ಟೋ ಮಂದಿ ಸಾವಿರ ಸಾವಿರ ರೂ. ನೀಡಿ ಪಂದ್ಯ ವೀಕ್ಷಣೆಗೆ ಟಿಕೆಟ್ ತೆಗೆದುಕೊಂಡಿದ್ದರು. ಒಂದು ಸಣ್ಣ ತುಂತುರು ಮಳೆಯಿಂದ ಪಂದ್ಯ ರದ್ದಾದರೆ ಹೇಗೆ? ನಮ್ಮ ಬೆಂಗಳೂರು ಅಥವಾ ಕೋಲ್ಕತ್ತಾದಲ್ಲಿ ಆಗಿದ್ದರೆ ಹೀಗಾಗುತ್ತಿರಲಿಲ್ಲ ಬಿಡಿ. ಅದು ಏನೇ ಹೇಳಿ ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಇಂಥ ಸ್ಥಿತಿ ಬರಬಾರದಿತ್ತು.