* ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯಕ್ಕೆ ಬೆಂಗಳೂರು ಆತಿಥ್ಯ* ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯ* ಕ್ರಿಕೆಟ್‌ ಅಭಿಮಾನಿಗಳ ಸಂಚಾರಕ್ಕೆ ನೆರವಾಗಲು ಮುಂದಾದ ನಮ್ಮ ಮೆಟ್ರೋ

ಬೆಂಗಳೂರು(ಜೂ.16): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ 5ನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ () ಆತಿಥ್ಯವನ್ನು ವಹಿಸಿದೆ. ಜೂನ್ 19ರಂದು ನಡೆಯಲಿರುವ ಹೈವೋಲ್ಟೇಜ್‌ ಪಂದ್ಯವನ್ನು ಮೈದಾನಕ್ಕೆ ಹೋಗಿ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಕ್ರಿಕೆಟ್ ಅಭಿಮಾನಿಗಳ ಸಂಚಾರಕ್ಕೆ ಅನುಕೂಲವಾಗಲೆಂದು 'ನಮ್ಮ ಮೆಟ್ರೋ' (Namma Metro) ಸಿಹಿ ಸುದ್ದಿಯೊಂದನ್ನು ನೀಡಿದ್ದು, ಸಂಚಾರದ ಅವಧಿಯನ್ನು ವಿಸ್ತರಿಸಿದೆ ಹಾಗೂ ಪೇಪರ್ ಮಾದರಿಯಲ್ಲಿ ಟಿಕೆಟ್ ವಿತರಿಸಲು ತೀರ್ಮಾನಿಸಿದೆ.

ಹೌದು, ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಕೊನೆಯ ಟಿ20 ಪಂದ್ಯವು ಭಾನುವಾರ ಸಂಜೆ ನಡೆಯುವುದರಿಂದಾಗಿ ಮೆಟ್ರೋ ಸಂಚಾರ ಅವಧಿಯನ್ನು ಬಿಎಂಆರ್‌ಸಿಎಲ್‌ ವಿಸ್ತರಿಸಿದೆ. ಇದರ ಜತೆಗೆ ಟಿಕೆಟ್‌ ಕೌಂಟರ್‌ನಲ್ಲಿ ಸಂಚಾರ ದಟ್ಟನೆಯನ್ನು ತಪ್ಪಿಸುವ ಸಲುವಾಗಿ ಪೇಪರ್ ಟಿಕೆಟ್‌ ವಿತರಿಸಲು ತೀರ್ಮಾನಿಸಲಾಗಿದೆ. ಜೂನ್ 19ರ ಭಾನುವಾರ ತಡರಾತ್ರಿಯವರೆಗೂ ಪಂದ್ಯ ಜರುಗುವುದರಿಂದಾಗಿ ಮೆಟ್ರೋ ಸಂಚಾರವನ್ನು ಸೋಮವಾರ ಬೆಳಗ್ಗೆ 1 ಗಂಟೆಯವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ.

ಇನ್ನುಳಿದಂತೆ ಜೂನ್‌ 19ರಂದು ಮಧ್ಯಾಹ್ನ 3 ಗಂಟೆಗೆ ಪೇಪರ್‌ ಟಿಕೆಟ್ ನೀಡಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. 50 ರುಪಾಯಿ ಟಿಕೆಟ್ ಪಡೆದು ವ್ಯಕ್ತಿಗಳು ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಸೋಮವಾರ ಬೆಳಗ್ಗೆ 1 ಗಂಟೆಯವರೆಗೆ ಮೆಟ್ರೋದಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಿಎಂಆರ್‌ಸಿಎಲ್‌ ಪೇಪರ್ ಟಿಕೆಟ್ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಕೂಡಾ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವಾಗ ಪೇಪರ್ ಟಿಕೆಟ್ ವಿತರಿಸುವ ಮೂಲಕ ಟಿಕೆಟ್‌ ಕೌಂಟರ್‌ನಲ್ಲಿ ಹೆಚ್ಚು ಜನ ಗುಂಪುಗೂಡದಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಪೈಕಿ ಮೊದಲ 3 ಪಂದ್ಯಗಳು ಮುಕ್ತಾಯವಾಗಿದ್ದು, ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ. ಆತಿಥೇಯ ಭಾರತ ತಂಡದ ಎದುರು ತೆಂಬ ಬವುಮಾ ನೇತೃತ್ವದ ಹರಿಣಗಳ ಪಡೆ ಮೊದಲೆರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಆದರೆ ವಿಶಾಖಪಟ್ಟಣಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಟೀಂ ಇಂಡಿಯಾ 48 ರನ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಟಿ20 ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಜೂನ್ 17ರಂದು 4ನೇ ಟಿ20 ಪಂದ್ಯವು ರಾಜ್‌ಕೋಟ್‌ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿದರೆ, ಬೆಂಗಳೂರಿನಲ್ಲಿ ನಡೆಯಲಿರುವ 5ನೇ ಹಾಗೂ ಕೊನೆಯ ಟಿ20 ಪಂದ್ಯವೂ ಮತ್ತಷ್ಟು ರೋಚಕತೆಯಿಂದ ಕೂಡಿರುವ ಸಾಧ್ಯತೆಯಿದೆ.

ಇನ್ನು ಟಿ20 ಪಂದ್ಯ ಹಿನ್ನಲೆ ಬಿಎಂಟಿಸಿಯಿಂದಲೂ ವಿಶೇಷ ಬಸ್ ಕಾರ್ಯಾಚರಣೆ ಮಾಡಲಾಗ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಹೋಗುವ ಕ್ರಿಕೆಟ್ ವೀಕ್ಷಕರಿಗೆ ಮಧ್ಯಾಹ್ನ 3 ಗಂಟೆಯಿಂದ ಪಂದ್ಯ ಮುಗಿಸಿ ವಾಪಾಸ್ ಹೋಗೋವರೆಗೂ ಸಾರಿಗೆ ಕಾರ್ಯಾಚರಣೆ ಮಾಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ HAL ರಸ್ತೆ ಮೂಲಕ ಕಾಡುಗೋಡಿ ಬಸ್ ನಿಲ್ದಾಣ, ಹೂಡಿ ರಸ್ತೆ, ಸರ್ಜಾಪುರ, ಎಲೆಕ್ಟ್ರಾನ್ ಸಿಟಿ, ಹೊಸೂರು ರೋಡ್, ಬನ್ನೇರುಘಟ್ಟ ಝೂ, ಕೆಂಗೇರಿ ಕೆಹೆಚ್ ಬಿ ಕ್ವಾರ್ಟರ್ಸ್, ಮಾಗಡಿ ರೋಡ್, ನೆಲಮಂಗಲ, ಯಲಹಂಕ, ನಾಗವಾರ ಟ್ಯಾನರಿ ರಸ್ತೆ, ಬಾಗಲೂರು, ಹೊಸಕೋಟೆ ಸೇರಿದಂತೆ ಹಲವೆಡೆಗೆ ಬಸ್ ಕಾರ್ಯಾಚರಣೆ ನಡೆಸಲಿದ್ದು, ಕ್ರಿಕೆಟ್ ವೀಕ್ಷಕರು ಸಾರಿಗೆ ಉಪಯೋಗವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಭಾರತ-ದಕ್ಷಿಣ ಆಫ್ರಿಕಾ ಟಿ-20: ಭದ್ರತೆ ಪರಿಶೀಲಿಸಿದ ಗೃಹಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಭಾನುವಾರ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಕ್ರಿಕೆಟ್‌ ಪಂದ್ಯದ ಬಂದೋಬಸ್ತ್‌ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Ind vs SA ಚಾಹಲ್, ಹರ್ಷಲ್ ದಾಳಿಗೆ ದಕ್ಷಿಣ ಆಫ್ರಿಕಾ ಬ್ರೇಕ್ ಫೇಲ್, ಭಾರತಕ್ಕೆ ಜಯದ ಥ್ರಿಲ್!

ಇದೇ ವೇಳೆ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ರೋಜರ್‌ ಬಿನ್ನಿ ಅವರು, ಐದು ದಿನಗಳ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ ಪಂದ್ಯಗಳಿಗೆ ಪೊಲೀಸ್‌ ಇಲಾಖೆ ವಿಧಿಸುವ ಭದ್ರತಾ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಅದನ್ನು ಪರಿಷ್ಕರಿಸಬೇಕೆಂದು ಸಚಿವರಿಗೆ ಕೋರಿಕೆ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿದ ಸಚಿವರು, ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಪದಾಧಿಕಾರಿಗಳಾದ ಸಂತೋಷ್‌ ಮೆನನ್‌, ವಿನಯ್‌ ಮೃತ್ಯುಂಜಯ, ಅಭಿರಾಮ್, ಕಾರ್ತಿಕ್‌ ಹಾಗೂ ಡಿ.ಎಸ್‌.ಅರುಣ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.