Asianet Suvarna News Asianet Suvarna News

Ind vs SA ಚಾಹಲ್, ಹರ್ಷಲ್ ದಾಳಿಗೆ ದಕ್ಷಿಣ ಆಫ್ರಿಕಾ ಬ್ರೇಕ್ ಫೇಲ್, ಭಾರತಕ್ಕೆ ಜಯದ ಥ್ರಿಲ್!

ಮೊದಲ ಟಿ20 ಪಂದ್ಯದಲ್ಲಿ ಬೌಲಿಂಗ್ ವಿಭಾಗ, 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದ ನೀರಸ ನಿರ್ವಹಣೆಯ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿದ್ದ ಭಾರತ, ಸರಣಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಣಾಯಕವಾಗಿದ್ದ 3ನೇ ಟಿ20 ಪಂದ್ಯದಲ್ಲಿ 48 ರನ್ ಗಳ ಗೆಲುವು ದಾಖಲಿಸಿದೆ.
 

Cricket News Harshal Patel Yuzvendra Chahal shines with ball Team India beat South Africa in 3rd T20I san
Author
Bengaluru, First Published Jun 14, 2022, 10:25 PM IST | Last Updated Jun 14, 2022, 10:28 PM IST

ವಿಶಾಖಪಟ್ಟಣ (ಜೂನ್ 14): ಮೊದಲ ಎರಡು ಪಂದ್ಯಗಳಲ್ಲಿ ನೀರಸ ಆಟದ ಕಾರಣದಿಂದಾಗಿ ಆಘಾತಕಾರಿ ಸೋಲು ಕಂಡಿದ್ದ ಟೀಮ್ ಇಂಡಿಯಾ (Team India) ಪ್ರವಾಸಿ ದಕ್ಷಿಣ ಆಫ್ರಿಕಾ (South Africa) ತಂಡಕ್ಕೆ ಕೊನೆಗೂ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ಸಾರಥ್ಯದ ಟೀಮ್ ಇಂಡಿಯಾ 48 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತು.

ಡಾ. ವೈಎಸ್  ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ (Dr. Y.S. Rajasekhara Reddy ACA-VDCA Cricket Stadium) ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ, ರುತುರಾಜ್ ಗಾಯಕ್ವಾಡ್ (57ರನ್, 35 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಇಶಾನ್ ಕಿಶನ್ (54ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್ ) ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಮೊದಲ ವಿಕೆಟ್ ಗೆ ಆಡಿದ 97 ರನ್ ಜೊತೆಯಾಟದ ನೆರವಿನಿಂದ ಭಾರತ ತಂಡ 5 ವಿಕೆಟ್ ಗೆ 179 ರನ್ ಬಾರಿಸಿತ್ತು.

180 ರನ್ ಗಳ ಸವಾಲಿನ ಮೊತ್ತವನ್ನು ಚೇಸಿಂಗ್ ಮಾಡಲು ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ, ಯಜುವೇಂದ್ರ ಚಾಹಲ್ (30ಕ್ಕೆ 3)  ಹಾಗೂ ಹರ್ಷಲ್ ಪಟೇಲ್ (25ಕ್ಕೆ 4) (Harshal Patel) ಮಧ್ಯಮ ಓವರ್‌ಗಳಲ್ಲಿ ನೀಡಿದ ಘಾತಕ ದಾಳಿಯಿಂದಾಗಿ 19.1 ಓವರ್ ಗಳಲ್ಲಿ 131 ರನ್ ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು. ಇದರೊಂದಿಗೆ ಟೀಮ್ ಇಂಡಿಯಾ ಐದು ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿದೆ.

ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮೊದಲ ಆರು ಓವರ್ ಗಳ ಪವರ್ ಪ್ಲೇ ಮುಕ್ತಾಯದ ವೇಳೆಗಾಗಲೇ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡಿತ್ತು. ನಾಯಕ ಟೆಂಬಾ ಬವುಮಾ 10 ಎಸೆತಗಳಲ್ಲಿ 8 ರನ್ ಬಾರಿಸಿ ಅಕ್ಸರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರೆ, 20 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಮೂಲಕ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ರೀಜಾ ಹೆಂಡ್ರಿಕ್ಸ್ ವಿಕಟ್ ಅನ್ನು ಹರ್ಷಲ್ ಪಟೇಲ್ ಉರುಳಿಸಿದರು.

IND VS SA ಸೌತ್ ಆಫ್ರಿಕಾಗೆ 180 ರನ್ ಟಾರ್ಗೆಟ್, ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾ!

ಮಧ್ಯಮ ಕ್ರಮಾಂಕದಲ್ಲಿ ಏಟು ನೀಡಿದ ಚಾಹಲ್: 38 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮಧ್ಯಮ ಓವರ್ ಗಳಲ್ಲಿ ಯಜುವೇಂದ್ರ ಚಾಹಲ್ ಘಾತಕ ಏಟು ನೀಡಿದರು. 16 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿದ್ದ ಡ್ವೈನ್ ಪ್ರಿಟೋರಿಯಸ್ ಚಾಹಲ್  (Yuzvendra Chahal) ಎಸೆತದಲ್ಲಿ ಪಂತ್‌ಗೆ ಕ್ಯಾಚ್ ನೀಡಿ ಹೊರನಡೆದರೆ, ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡದ ಗೆಲುವಿನ ಹೀರೋ ಆಗಿದ್ದ ರಸ್ಸಿ ವಾನ್ ಡರ್ ಡುಸೆನ್ (Rassie van der Dussen) ಕೇವಲ 4 ಎಸೆತ ಎದುರಿಸಿ ವಿಕೆಟ್ ಒಪ್ಪಿಸಿದರು. ಈ ಮೊತ್ತಕ್ಕೆ 14 ರನ್ ಸೇರಿಸುವ ವೇಳೆಗೆ ಹರ್ಷಲ್ ಪಟೇಲ್ ಪಂದ್ಯದ ಬಹುಮುಖ್ಯವಾದ ವಿಕೆಟ್ ಉರುಳಿಸಿದರು. ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್ 5 ಎಸೆತಗಳಲ್ಲಿ 3 ರನ್ ಬಾರಿಸಿ ರುತುರಾಜ್ ಗಾಯಕ್ವಾಡ್ ಗೆ ಕ್ಯಾಚ್ ನೀಡಿ ಹೊರನಡೆದಾಗ ಭಾರತದ ಗೆಲುವು ಬಹುತೇಕ ಖಚಿತವಾಗಿತ್ತು.

ದಾಖಲೆಯ 48,390 ಕೋಟಿ ರೂಪಾಯಿಗೆ ಐದು ವರ್ಷಗಳ IPL Media Rights ಮಾರಾಟ!

ಆದರೆ, ಒಂದೆಡೆ ಪ್ರವಾಸಿ ತಂಡದ ಗೆಲುವಿಗೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಹೆನ್ರಿಚ್ ಕ್ಲಾಸೆನ್ ಹೋರಾಟ ನಡೆಸಿದ್ದರು. ತಂಡದ ಮೊತ್ತವನ್ನು 100ರ ಗಡಿ ದಾಟಿಸುವಲ್ಲಿ ಕ್ಲಾಸೆನ್ ಯಶ ಕಂಡ ವೇಳೆಯಲ್ಲಿಯೇ ದಾಳಿಗಿಳಿದಿದ್ದ ಯಜುವೇಂದ್ರ ಚಾಹಲ್, ಕ್ಲಾಸೆನ್ ಅವರನ್ನು ಡಗ್ಔಟ್‌ಗೆ ಅಟ್ಟಿದರು. ಅಲ್ಲಿಗೆ ಭಾರತದ ಜಯ ಖಚಿತವಾಗಿತ್ತು. ಕೊನೆಯಲ್ಲಿ ಕಗೀಸೋ ರಬಾಡ, ವೇಯ್ನ್ ಪರ್ನೆಲ್ ಹಾಗೂ ಕೇಶವ್ ಮಹಾರಾಜ್ ಕೆಲ ರನ್‌ಗಳನ್ನು ಬಾರಿಸಿದರೂ ಇದು ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಸಾಧ್ಯವಾಗಲಿಲ್ಲ.

Latest Videos
Follow Us:
Download App:
  • android
  • ios