ಇಂಡೋ-ಆಫ್ರಿಕಾ ಮೊದಲ ಪಂದ್ಯ ನಡಿಯೋದು ಡೌಟ್..!
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ನಡೆಯುವುದು ಬಹುತೇಕ ಅನುಮಾನ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
ಧರ್ಮಶಾಲಾ(ಮಾ.12): ಕೊರೋನಾ ವೈರಸ್ ಭೀತಿಯ ನಡುವೆಯೂ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಮೊದಲ ಏಕದಿನ ನಡೆಯುವುದು ಅನುಮಾನ ಎನಿಸಿದೆ.
ಹೌದು, ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ವರುಣರಾಯ ಅಡ್ಡಿ ಪಡಿಸುವ ಸಾಧ್ಯತೆಯಿದೆ. ಕಳೆದ ವರ್ಷ ಇಲ್ಲಿ ನಡೆಯಬೇಕಿದ್ದ ಭಾರತ-ದ.ಆಫ್ರಿಕಾ ನಡುವಿನ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಬಾರಿಯೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಬುಧವಾರ ಮಳೆಯಿಂದಾಗಿ ಪಿಚ್ ಹಾಗೂ ಔಟ್‌ಫೀಲ್ಡ್‌ಗೆ ಹೊದಿಕೆ ಹೊದಿಸಲಾಗಿತ್ತು. ಗುರುವಾರ ಇಡೀ ದಿನ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ ಇದೆ. ಹೀಗಾಗಿ ಪಂದ್ಯ ನಡೆಯುವುದು ಅನುಮಾನವೆನಿಸಿದೆ.
ಧರ್ಮಶಾಲಾದಲ್ಲಿಂದು ಇಂಡೋ-ಆಫ್ರಿಕಾ ಮೊದಲ ಒನ್ ಡೇ ಮ್ಯಾಚ್
ಮಳೆ ಅಡ್ಡಿಪಡಿಸದಂತೆ ನಾಗ ದೇವರಿಗೆ ಮೊರೆ!
ಗುರುವಾರದ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸದಂತೆ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ನಾಗ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಲ್ಲಿನ ಸ್ಥಳೀಯ ದೇವರಾದ ಇಂದ್ರು ನಾಗ ದೇವಸ್ಥಾನದಲ್ಲಿ ಅಧಿಕಾರಿಗಳು ಪ್ರಾರ್ಥನೆ ಸಲ್ಲಿಸಿರುವುದಾಗಿ ಹಿಮಾಚಲ ಕ್ರಿಕೆಟ್ ಸಂಸ್ಥೆ ಕಾರ‍್ಯದರ್ಶಿ ಸುಮಿತ್ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊರೋನಾ ಭೀತಿ: ಬೌಲರ್‌ಗಳಿಗೆ ಸವಾಲು!
ಕೊರೋನಾ ಸೋಂಕಿನ ಭೀತಿಯಿಂದಾಗಿ ಚೆಂಡಿನ ಹೊಳಪು ಕಾಪಾಡುವುದು ಬೌಲರ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಭಾರತ ತಂಡದ ವೇಗಿ ಭುವನೇಶ್ವರ್ ಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸೋಂಕು ಹರಡದಿರಲು ಮುನ್ನೆಚ್ಚರಿಕಾ ಕ್ರಮವಾಗಿ, ಚೆಂಡಿನ ಮೇಲೆ ಉಗುಳು ಬಳಸುವುದನ್ನು ಸಾಧ್ಯವಾದಷ್ಟುಕಡಿಮೆ ಮಾಡುವುದಾಗಿ ಹೇಳಿದರು.