ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ 2ನೇ T20 ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ಭಾರಿ ಆಘಾತ. ತೊಡೆಯ ಸ್ನಾಯುವಿನ ಗಾಯದಿಂದ ಇಶಾನ್ ಕಿಶನ್ ಹೊರಬಿದ್ದಿದ್ದು, ಪರ್ಯಾಯ ಆಟಗಾರನಾಗಿ ಹೊಸ ಕಿಲಾಡಿಯೊಬ್ಬನು ಎಂಟ್ರಿ ಕೊಡಲಿದ್ದಾನೆ. ಯಾರು ಆ ಹೊಸ ಪ್ಲೇಯರ್ ಇಲ್ಲಿದೆ ಸಂಪೂರ್ಣ ವಿವರ.
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ T20ಐ ಪಂದ್ಯ ನಾಳೆ ಕ್ರೈಸ್ಟ್‌ಚರ್ಚ್ ಮೈದಾನದಲ್ಲಿ ಮಧ್ಯಾಹ್ನ 12:30ಕ್ಕೆ ನಡೆಯಲಿದೆ. ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾಗೆ ಈ ಪಂದ್ಯಕ್ಕೂ ಮುನ್ನ ಭಾರಿ ಆಘಾತ ಎದುರಾಗಿದೆ. ಸ್ಟಾರ್ ಆಟಗಾರ ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದಾಗಿ 2ನೇ T20ಐನಿಂದ ಹೊರಬಿದ್ದಿದ್ದಾರೆ. ಅದರೊಂದಿಗೆ ಹೊಸ ಪ್ಲೇಯರ್ ರಿಪ್ಲೆಸ್ಮೆಂಟ್ ಅನಿವಾರ್ಯ. ಈ ನಿಟ್ಟಿನಲ್ಲಿ ವೈಭವ ಕಥೆ ಏನು? ಬರುತ್ತಿರುವ ಕಿಲಾಡಿ ಪ್ಲೇಯರ್ ಯಾರು? ಇಲ್ಲಿದೆ ಸಂಪೂರ್ಣ ವಿವರ.
ತೊಡೆಯ ಸ್ನಾಯುವಿನ ಗಾಯದ ಸಮಸ್ಯೆ!
ಬಲ ತೊಡೆಯ ಸ್ನಾಯುವಿನ ಗಾಯಕ್ಕೆ ಒಳಗಾಗಿರುವ ಇಶಾನ್ ಕಿಶನ್ ಈ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಇಶಾನ್ ಅವರ ಗಾಯದಿಂದಾಗಿ ಆಡುವ ಹನ್ನೊಂದರ ಬಳಗದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಶಿವಂ ದುಬೆ ಆಲ್‌ರೌಂಡರ್ ಆಗಿದ್ದರೂ, ಇಶಾನ್ ಸ್ಥಾನವನ್ನು ಭರ್ತಿ ಮಾಡಲು ವೈಭವ್ ಸೂಕ್ತ ಆಯ್ಕೆಯಾಗಿದ್ದಾರೆ.
ಇಶಾನ್ ಬದಲಿಗೆ ಕುಮಾರ್ ಕುಶಾಗ್ರ ತಂಡಕ್ಕೆ ಎಂಟ್ರಿ!
ಇಶಾನ್ ಕಿಶನ್ ಅಲಭ್ಯತೆಯ ಹಿನ್ನೆಲೆಯಲ್ಲಿ ಬಿಸಿಸಿಐ ಜಾರ್ಖಂಡ್‌ನ 21 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ಕುಮಾರ್ ಕುಶಾಗ್ರ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಪ್ರಸ್ತುತ ಸಂಜು ಸ್ಯಾಮ್ಸನ್ ಪ್ರಮುಖ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತುರ್ತು ಸಂದರ್ಭದಲ್ಲಿ ವಿಕೆಟ್ ಕೀಪಿಂಗ್ ಆಯ್ಕೆ ಕಾಯ್ದುಕೊಳ್ಳಲು ಕುಶಾಗ್ರ ಅವರನ್ನು ಮೀಸಲು ವಿಕೆಟ್ ಕೀಪರ್ ಆಗಿ ತರಲಾಗಿದೆ. ಕುಶಾಗ್ರ ಪರ್ಯಾಯ ಕೀಪರ್ ಆಗಿರುವುದರಿಂದ, ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡುವ ಬಳಗದಲ್ಲಿ ಕಣಕ್ಕಿಳಿಯುವುದಕ್ಕೆ ಯಾವುದೇ ತೊಂದರೆಯಿಲ್ಲ.
ದೇಶೀಯ ಕ್ರಿಕೆಟ್‌ನಲ್ಲಿ ಕುಮಾರ್ ಕುಶಾಗ್ರ ಸಾಹಸ!
ಅಗ್ರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಕುಶಾಗ್ರ, ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಫೈನಲ್‌ನಲ್ಲಿ 101 ರನ್‌ಗಳ ಭರ್ಜರಿ ಶತಕ ಗಳಿಸಿದ್ದರು. ಆ ಬಳಿಕ ಆಸ್ಟ್ರೇಲಿಯಾ 'ಎ' ವಿರುದ್ಧ ಭಾರತ 'ಎ' ಪರ ಆಡಿ ಮೊದಲ ಇನ್ನಿಂಗ್ಸ್‌ನಲ್ಲಿ 113 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಔಟಾಗದೆ 46 ರನ್ ಕಲೆಹಾಕಿದ್ದರು. 38 ಪ್ರಥಮ ದರ್ಜೆ ಪಂದ್ಯಗಳಲ್ಲಿ 2,507ಕ್ಕೂ ಹೆಚ್ಚು ರನ್ ಗಳಿಸಿರುವ ಕುಶಾಗ್ರ, 2022ರ ರಣಜಿ ಟ್ರೋಫಿಯಲ್ಲಿ ನಾಗಾಲ್ಯಾಂಡ್ ವಿರುದ್ಧ ಕೇವಲ 17 ವರ್ಷ 144 ದಿನಗಳ ವಯಸ್ಸಿನಲ್ಲಿ 266 ರನ್ ಸಿಡಿಸಿದ್ದರು. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 250+ ರನ್ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದರು.







