*ಇಂದಿನಿಂದ ಭಾರತ-ನ್ಯೂಜಿಲೆಂಡ್‌ ಮೊದಲ ಟೆಸ್ಟ್‌*ಕ್ಯಾಪ್ಟನ್‌ ರಹಾನೆ, ಕೋಚ್‌ ದ್ರಾವಿಡ್‌ ಮೇಲೆ ಎಲ್ಲರ ಕಣ್ಣು*ಶ್ರೇಯಸ್‌ಗೆ ಆಡುವ 11ರಲ್ಲಿ ಸ್ಥಾನ ಖಚಿತ*ಮಯಾಂಕ್‌ ಜತೆ ಗಿಲ್‌ ಇನ್ನಿಂಗ್ಸ್‌ ಆರಂಭಿಸುವುದು ಬಹುತೇಕ ಪಕ್ಕಾ*ನ್ಯೂಜಿಲೆಂಡ್‌ ಭಾರತದಲ್ಲಿ ಟೆಸ್ಟ್‌ ಪಂದ್ಯವೊಂದನ್ನು ಗೆದ್ದು 33 ವರ್ಷ 

ಕಾನ್ಪುರ(ನ.25): ಭಾರತ ಹಾಗೂ ನ್ಯೂಜಿಲೆಂಡ್‌ (India Vs Newzealand) ನಡುವಿನ 2 ಪಂದ್ಯಗಳ ಟೆಸ್ಟ್‌ ಸರಣಿಗೆ (Test Series) ವೇದಿಕೆ ಸಿದ್ಧವಾಗಿದ್ದು, ಮೊದಲ ಟೆಸ್ಟ್‌ಗೆ ಇಲ್ಲಿನ ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರದಿಂದ ಚಾಲನೆ ದೊರೆಯಲಿದೆ. ಅತ್ತ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ನ ಸೋಲಿನ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಭಾರತವಿದ್ದರೆ, ಇತ್ತ ಟಿ20 ಸರಣಿಯಲ್ಲುಂಟಾದ ಸೋಲಿಗೆ ಭಾರತಕ್ಕೆ ತಿರುಗೇಟು ನೀಡುವ ತವಕದಲ್ಲಿದೆ ಕಿವೀಸ್‌ ಪಡೆ. ಭಾರತದ ನೆಲದಲ್ಲಿ ಒಂದೇ ಒಂದು ಟೆಸ್ಟ್‌ ಸರಣಿಯನ್ನೂ ಗೆದ್ದಿರದ ಕಿವೀಸ್‌ ಇತಿಹಾಸ ಬದಲಿಸುವ ಉತ್ಸಾಹದಲ್ಲಿದೆ.

ಪೂರ್ಣ ಪ್ರಮಾಣದ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ (Rahul Dravid) ಅವರಿಗೆ ಮೊದಲ ಟೆಸ್ಟ್‌ ಇದಾಗಿದ್ದು, ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ (Ajinkya Rahane) ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಕೆ.ಎಲ್‌.ರಾಹುಲ್‌ ಗಾಯಗೊಂಡು ಸರಣಿಯಿಂದ ಹೊರ ನಡೆದಿದ್ದಾರೆ. ಇದೀಗ ಯುವ ಆಟಗಾರರನ್ನೇ ಒಳಗೊಂಡ ತಂಡ ಕಣಕ್ಕೆ ಇಳಿಯಲಿದೆ. ಮಯಾಂಕ್‌ ಅಗರ್‌ವಾಲ್‌ ಜತೆ ಶುಭ್‌ಮನ್‌ ಗಿಲ್‌ ಇನ್ನಿಂಗ್ಸ್‌ ಆರಂಭಿಸುವುದು ಖಚಿತವಾಗಿದ್ದು, ಚೇತೇಶ್ವರ ಪೂಜಾರ, ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹ, ರಹಾನೆ ಬ್ಯಾಟಿಂಗ್‌, ರವೀಂದ್ರ ಜಡೇಜಾ ಜವಾಬ್ದಾರಿ ಹೊರಲಿದ್ದಾರೆ.

ಅಯ್ಯರ್‌ಗೆ ಸ್ಥಾನ:

ಆಡುವ 11ರ ಬಳಗದಲ್ಲಿ ಶ್ರೇಯಸ್‌ ಅಯ್ಯರ್‌ ಇರಲಿದ್ದಾರೆ ಎಂದು ನಾಯಕ ರಹಾನೆ ಹೇಳಿದ್ದು, ಈ ಮೂಲಕ ಟೀಂ ಇಂಡಿಯಾ ಪರವಾಗಿ ಅಯ್ಯರ್‌ ಟೆಸ್ಟ್‌ಗೆ ಪಾದಾರ್ಪಣೆ ಮಾಡುವುದು ಖಚಿತವಾಗಿದೆ. ಶ್ರೇಯಸ್‌ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆ ಹೆಚ್ಚಿದೆ.

ಸ್ಪಿನ್ನರ್‌ಗಳ ಬಲ:

ಅನುಭವಿ ಆರ್‌.ಅಶ್ವಿನ್‌ ತಂಡಕ್ಕೆ ಮರಳಿರುವುದು ಭಾರತದ ಬೌಲಿಂಗ್‌ ಬಲವನ್ನು ದುಪ್ಪಟ್ಟುಗೊಳಿಸಿದೆ. ಜಡೇಜಾ ಜೊತೆಗೆ ಅಕ್ಷರ್‌ ಪಟೇಲ್‌ ಇದ್ದು, ಕಾನ್ಪುರ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಹಿನ್ನೆಲೆಯಲ್ಲಿ ಭಾರತ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿದರೂ ಅಚ್ಚರಿಯಿಲ್ಲ. ಇನ್ನು ಇಶಾಂತ್‌ ಶರ್ಮಾ, ಯಮೇಶ್‌ ಯಾದವ್‌, ಮೊಹಮ್ಮದ್‌ ಸಿರಾಜ್‌ರಂತಹ ಅನುಭವಿ ವೇಗಿಗಳಿದ್ದು, ತಂಡ ಸಂಯೋಜನೆ ವೇಳೆ ಯಾರಿಗೆ ಅವಕಾಶ ಲಭಿಸಲಿದೆಯೋ ಕಾದು ನೋಡಬೇಕಿದೆ.

Harbhajan House sale : ಮುಂಬೈ ಮನೆ ಮಾರಿದ ಭಜ್ಜಿಗೆ ಡಬಲ್ ಹ್ಯಾಟ್ರಿಕ್ !

ವಿಲಿಯಮ್ಸನ್‌ ಬಲ:

ಅತ್ತ ನಾಯಕ ಕೇನ್‌ ವಿಲಿಯಮ್ಸನ್‌ ತಂಡಕ್ಕೆ ಮರಳಿರುವುದು ನ್ಯೂಜಿಲೆಂಡ್‌ ಬಲವನ್ನು ಹೆಚ್ಚಿಸಿದೆ. ವಿಲಿಯಮ್ಸನ್‌ ವಿಶ್ವ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದು, ಸುದೀರ್ಘವಾಗಿ ಐಪಿಎಲ್‌ನಲ್ಲಿ ಆಡುತ್ತಿರುವ ಕಾರಣ ಭಾರತದ ಪಿಚ್‌ಗಳಿಗೆ ಅವರು ಸುಲಭವಾಗಿ ಹೊಂದಿಕೊಳ್ಳಲಿದ್ದಾರೆ. ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ ಫೈನಲ್‌ನಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ 49 ಮತ್ತು 2ನೇ ಇನ್ನಿಂಗ್ಸ್‌ನಲ್ಲಿ ಅಜೇಯ 52 ರನ್‌ ಗಳಿಸಿದ್ದರು. ರಾಸ್‌ ಟೇಲರ್‌, ಟಾಪ್‌ ಲ್ಯಾಥಮ್‌ ಯಾವುದೇ ಪಿಚ್‌ನಲ್ಲೂ ಸುಲಭವಾಗಿ ರನ್‌ ಗಳಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.

ಮೂವರು ಸ್ಪಿನ್ನರ್‌ಗಳು?:

ಭಾರತೀಯ ಪಿಚ್‌ಗಳು ಸ್ಪಿನ್ನರ್‌ಗಳು ಮಿಂಚುವ ಕಾರಣ, ಈ ಬಾರಿ ನ್ಯೂಜಿಲೆಂಡ್‌ ಸಹ ಇದೇ ಪ್ರಯೋಗಕ್ಕೆ ಮುಂದಾಗಿದೆ. ತಂಡದಲ್ಲಿ ಮೂವರು ಸ್ಪಿನ್ನರ್‌ಗಳಿದ್ದರೂ ಅಚ್ಚರಿಯಿಲ್ಲ ಎಂದು ಕೋಚ್‌ ಗ್ಯಾರಿ ಸ್ಟೇಡ್‌ ಹಾಗೂ ನಾಯಕ ವಿಲಿಯಮ್ಸನ್‌ ಹೇಳಿದ್ದಾರೆ. ಮಿಚೆಲ್‌ ಸ್ಯಾಂಟ್ನರ್‌, ಏಜಾಜ್‌ ಪಟೇಲ್‌, ವಿಲಿಯಂ ಸೊಮರ್‌ವಿಲ್ಲೆ, ರಚಿನ್‌ ರವೀಂದ್ರ ತಂಡದ ಪ್ರಮುಖ ಸ್ಪಿನ್‌ ಅಸ್ತ್ರಗಳಾಗಿದ್ದಾರೆ. ಟೀಮ್‌ ಸೌಥಿ, ನೀಲ್‌ ವ್ಯಾಗ್ನರ್‌, ಕೈಲ್‌ ಜೇಮಿಸನ್‌ ನ್ಯೂಜಿಲೆಂಡ್‌ ಬತ್ತಳಿಕೆಯಲ್ಲಿರುವ ವೇಗಿಗಳಾಗಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಶುಭ್‌ಮನ್‌, ಮಯಾಂಕ್‌, ಪೂಜಾರ, ಶ್ರೇಯಸ್‌, ರಹಾನೆ(ನಾಯಕ), ಸಹಾ, ಜಡೇಜಾ, ಅಶ್ವಿನ್‌, ಇಶಾಂತ್‌, ಅಕ್ಷರ್‌, ಸಿರಾಜ್‌

Gautam Gambhir: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ಐಸಿಸಿ ಉಗ್ರರಿಂದ ಜೀವಬೆದರಿಕೆ..!

ನ್ಯೂಜಿಲೆಂಡ್‌: ಬ್ಲಂಡೆಲ್‌, ಕಾನ್ವೆ, ವಿಲಿಯಮ್ಸನ್‌(ನಾಯಕ), ಟೇಲರ್‌, ಲ್ಯಾಥಮ್‌, ರಚಿನ್‌, ಏಜಾಜ್‌, ಸ್ಯಾಂಟ್ನರ್‌, ಸೌಥಿ, ವ್ಯಾಗ್ನರ್‌, ಜೇಮಿಸನ್‌

ಪಿಚ್‌ ರಿಪೋರ್ಟ್‌:

ಕಾನ್ಪುರ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಮೊದಲ ಎರಡು ದಿನ ಬ್ಯಾಟ್ಸ್‌ಮನ್‌ಗಳ ಪರವಾಗಿ ವರ್ತಿಸುವ ಸಾಧ್ಯತೆ ದಟ್ಟವಾಗಿದ್ದು, ಚಳಿಗಾಲವಾದ ಕಾರಣ ಆರಂಭಿಕ ಅವಧಿಯಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗಬಹುದು. ಮೊದಲು ಬ್ಯಾಟ್‌ ಮಾಡಿರುವ ತಂಡಗಳೇ ಹೆಚ್ಚಿನ ಗೆಲುವ ಸಾಧಿಸಿದ್ದು, ಟಾಸ್‌ ಗೆಲ್ಲುವ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಲಿದೆ.

ಮುಖಾಮುಖಿ: 60, ಭಾರತ: 21, ನ್ಯೂಜಿಲೆಂಡ್‌: 13, ಡ್ರಾ: 26