ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯವನ್ನು ಗೆದ್ದು ಹ್ಯಾಟ್ರಿಕ್ ಸರಣಿ ವಶಪಡಿಸಿಕೊಳ್ಳಲು ಭಾರತ ಸಜ್ಜಾಗಿದೆ. ವೆಲ್ಲಿಂಗ್ಟನ್ ಮೈದಾನದ ವಿಭಿನ್ನ ವಾತಾವರಣಕ್ಕೆ ತಕ್ಕಂತೆ ಭಾರತ ತನ್ನ ರಣತಂತ್ರ ಬದಲಿಸುವ ಸಾಧ್ಯತೆಯಿದೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ತೀವ್ರ ನಿರೀಕ್ಷೆ ಇಡಲಾಗಿದೆ.
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರವಾಸವನ್ನು ಎರಡು ರೋಚಕ ಗೆಲುವುಗಳೊಂದಿಗೆ ಆರಂಭಿಸಿರುವ ಭಾರತ, ಮಂಗಳವಾರ 3ನೇ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. 2020, 2022-23ರ ಪ್ರವಾಸಗಳಲ್ಲಿ ಟಿ20 ಸರಣಿಯನ್ನು ಗೆದ್ದಿದ್ದ ಭಾರತ, ಈಗ ಹ್ಯಾಟ್ರಿಕ್ ಸರಣಿ ಜಯದ ಮೇಲೆ ಕಣ್ಣಿಟ್ಟಿದೆ.
ನ್ಯೂಜಿಲೆಂಡ್ ವಿರುದ್ಧ ಕೊನೆ 10 ಪಂದ್ಯಗಳಲ್ಲಿ ಭಾರತ 9ರಲ್ಲಿ ಗೆದ್ದಿದ್ದು, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಆದರೆ ಕ್ರೈಸ್ಟ್ಚರ್ಚ್ನಲ್ಲಿನ ಮೈದಾನ, ವಾತಾವರಣಕ್ಕೂ ವೆಲ್ಲಿಂಗ್ಟನ್ಗೂ ಬಹಳ ವ್ಯತ್ಯಾಸವಿದೆ. ವೆಲ್ಲಿಂಗ್ಟನ್ ಕ್ರೀಡಾಂಗಣದ ಬೌಂಡರಿಗಳ ಆಳತೆ ಸಣ್ಣದಿದ್ದು, ವಿಪರೀತ ಗಾಳಿ ಇರಲಿದೆ. ಹೀಗಾಗಿ, ಭಾರತ ತನ್ನ ರಣತಂತ್ರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ವೈಭವ್ ಸೂರ್ಯವಂಶಿಗೆ ಇನ್ನೊಂದು ಚಾನ್ಸ್:
ಇಶಾನ್ ಕಿಶನ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ವೈಭವ್ ಸೂರ್ಯವಂಶಿಗೆ ಮತ್ತೊಂದು ಅವಕಾಶ ಸಿಗಲಿದೆ. 3ನೇ ಕ್ರಮಾಂಕದಲ್ಲಿ ವೈಭವ್ ಆಡಲಿದ್ದಾರೆ. ಕಳೆದ ಪಂದ್ಯದಲ್ಲಿ ಕೇವಲ 4 ರನ್ಗೆ ಔಟಾಗಿದ್ದ 15ರ ಆಟಗಾರ, ಈ ಪಂದ್ಯದಲ್ಲಿ ದೊಡ್ಡ ಸ್ಕೋರ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಬೌಲರ್ಗಳು ದುಬಾರಿ ಆಗುತ್ತಿರುವುದು ತಂಡಕ್ಕೆ ತಲೆನೋವು ತಂದೊಡ್ಡಿದೆ. ಪ್ರಮುಖವಾಗಿ ಭುವನೇಶ್ವರ್ ಕುಮಾರ್ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಬೇಕಿದ್ದರೆ ಅಸಾಧಾರಣ ಪ್ರದರ್ಶನ ತೋರಬೇಕಿದೆ.
ಮತ್ತೊಂದೆಡೆ ನ್ಯೂಜಿಲೆಂಡ್ಗೆ ವೇಗಿ ಮ್ಯಾಟ್ ಹೆನ್ರಿ ಸೇವೆ ಅಲಭ್ಯವಾಗಲಿದ್ದು, ಕೈಲ್ ಜೇಮಿಸನ್ರನ್ನು ಆಡಿಸುವ ಸಾಧ್ಯತೆ ಇದೆ.
ಸಂಭವನೀಯ ತಂಡಗಳು
ಭಾರತ: ಅಭಿಷೇನ್, ಸ್ಯಾಮ್ಸನ್, ವೈಭವ್, ಶ್ರೇಯಸ್ (ನಾಯಕ), ತಿಲಕ್, ನಮನ್ ಧೀರ್, ನಿತೀಶ್ ರೆಡ್ಡಿ, ಅಕ್ಷರ್, ಭುವನೇಶ್ವರ್, ಪ್ರಿನ್ಸ್ ಯಾದವ್, ಅರ್ಶ್ದೀಪ್
ನ್ಯೂಜಿಲೆಂಡ್: ಆ್ಯಲೆನ್, ಸೈಫರ್ಟ್, ಜೇಕಬ್ಸ್/ಕಾನ್ವೇ, ಫಿಲಿಪ್ಸ್, ಮಿಚೆಲ್, ಬ್ರೇಸ್ವೆಲ್, ಸ್ಯಾಂಟ್ನರ್ (ನಾಯಕ), ನೇಥನ್ ಸ್ಮಿತ್, ಜೇಮಿಸನ್, ಮಿಲ್ನೆ, ಜೇಕಬ್ ಡಫಿ.
ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್/ಸೋನಿ ಲಿವ್







