ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಸರಣಿ ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ಗಾಯದ ಸಮಸ್ಯೆಯಿಂದ ಇಶಾನ್ ಕಿಶನ್ ಹೊರಗುಳಿದಿದ್ದು, ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅವಕಾಶ ಒಲಿದುಬಂದಿದೆ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ವೆಲ್ಲಿಂಗ್ಟನ್: ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ಅರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೂರನೇ ಟಿ20 ಪಂದ್ಯವು ಅಕ್ಟೋಬರ್ 27ರ ಮಂಗಳವಾರ ನಡೆಯಲಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ ಮೊದಲೆರಡು ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ, ಇದೀಗ ಮೂರನೇ ಟಿ20 ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಮೂರನೇ ಟಿ20 ಪಂದ್ಯದಿಂದಲೂ ಇಶಾನ್ ಕಿಶನ್ ಔಟ್:

ಇನ್ನು ಮೊದಲ ಟಿ20 ಪಂದ್ಯದ ವೇಳೆಯಲ್ಲಿಯೇ ಸ್ನಾಯು ಸೆಳೆತಕ್ಕೆ ಒಳಗಾಗಿ ಎರಡನೇ ಟಿ20 ಪಂದ್ಯದಿಂದ ಹೊರಗುಳಿದಿದ್ದ ಇಶಾನ್ ಕಿಶನ್, ಇದೀಗ ಮೂರನೇ ಟಿ20 ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಈಗಾಗಲೇ ಬಿಸಿಸಿಐ ಅಧಿಕೃತವಾಗಿ ಖಚಿತಪಡಿಸಿದೆ. ಹೀಗಾಗಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.

ಓಪನ್ನಿಂಗ್ ಕಾಂಬಿನೇಷನ್ ಬದಲು:

ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಸದ್ಯ ಭಾರತದ ಮೊದಲ ಆಯ್ಕೆಯ ಯಶಸ್ವಿ ಆರಂಭಿಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಇಶನ್ ಕಿಶನ್ ಅಲಭ್ಯತೆಯ ಬೆನ್ನಲ್ಲೇ ಮೂರನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆರಂಭಿಕನಾಗಿ ಕಣಕ್ಕಿಳಿಯಲಿ ಎನ್ನುವ ಚರ್ಚೆಯೂ ಶುರುವಾಗಿದೆ. ಯಾಕೆಂದರೆ ವೈಭವ್ ಸೂರ್ಯವಂಶಿ ಆರಂಭಿಕನಾಗಿಯೇ ಹೆಚ್ಚು ಯಶಸ್ವಿಯಾಗಿರುವುದು. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲೂ ಭಾರತ ಪರ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿದ್ದರು. ಇನ್ನು ಕಳೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿದು 8 ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

ಇದೆಲ್ಲದರ ಹೊರತಾಗಿಯೂ ಮೂರನೇ ಟಿ20 ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ವೈಭವ್ ಸೂರ್ಯವಂಶಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿಯಲಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಐದನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟ್ ಮಾಡಲಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲಿ ತಿಲಕ್ ವರ್ಮಾ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೂವರು ಆಲ್ರೌಂಡರ್‌ಗಳಲ್ಲಿ ಯಾವುದೇ ಬದಲಾವಣೆಯಿಲ್ಲ:

ಇನ್ನು ಆಲ್ರೌಂಡರ್ ರೂಪದಲ್ಲಿ ನಿತೀಶ್‌ ಕುಮಾರ್ ರೆಡ್ಡಿ, ನಮನ್ ಧೀರ್ ಹಾಗೂ ಅಕ್ಷರ್ ಪಟೇಲ್ ಈ ಮೂವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ. ಕಳೆದ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ 26 ರನ್ ಚಚ್ಚಿದ್ದರು. ನಮನ್ ಧೀರ್ ಹಾಗೂ ಅಕ್ಷರ್ ಪಟೇಲ್ ಕೂಡಾ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.

ಇನ್ನುಳಿದಂತೆ ಭುವನೇಶ್ವರ್ ಕುಮಾರ್ ಹಾಗೂ ಅರ್ಶದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ದಾಳಿ ನಡೆಸಲಿದ್ದು, ಪ್ರಿನ್ಸ್ ಯಾದವ್ ಮತ್ತೊಮ್ಮೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಳಲಿದ್ದಾರೆ.

ಮೂರನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ:

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ನಮನ್ ಧೀರ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಪ್ರಿನ್ಸ್ ಯಾದವ್.