ಮುಂಬೈ ಇಂಡಿಯನ್ಸ್ ತಂಡದ ನೂತನ ಹೆಡ್ ಕೋಚ್ ಆಗಿ ಕೀರನ್ ಪೊಲ್ಲಾರ್ಡ್ ನೇಮಕವಾಗಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ಜೆರ್ಸಿ ಬಣ್ಣಗಳ ಬದಲಿಗೆ ಕೇವಲ ಮುಂಬೈನ ನೀಲಿ ಬಣ್ಣ ರಾರಾಜಿಸುವಂತೆ ಮಾಡಲು ಅವರು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ತಂಡದಲ್ಲಿ ಮತ್ತೆ ಹೊಸ ಚೈತನ್ಯ ತುಂಬುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮುಂಬೈ: ಮಹೇಲಾ ಜಯವರ್ಧನೆ ಅವರಿಂದ ತೆರವಾಗಿದ್ದ ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಸ್ಥಾನಕ್ಕೆ ಇದೀಗ ಕೆರಿಬಿಯನ್ ಮೂಲದ ಮಾಜಿ ಕ್ರಿಕೆಟಿಗ ಕೀರನ್ ಪೊಲ್ಲಾರ್ಡ್‌ ಹೆಡ್‌ ಕೋಚ್ ಆಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ವಾಂಖೆಡೆ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ನ ಜೆರ್ಸಿ ಕಾಣಿಸಬಾರದು ಎನ್ನುವ ಸ್ಪಷ್ಟ ಸಂದೇಶವನ್ನು ಮುಂಬೈ ಇಂಡಿಯನ್ಸ್ ಫ್ಯಾನ್ಸ್‌ಗೆ ರವಾನಿಸಿದ್ದಾರೆ.

ಮುಂಬೈ ಫ್ಯಾನ್ಸ್‌ಗೆ ನೂತನ ಕೋಚ್ ಪೊಲ್ಲಾರ್ಡ್ ಸಂದೇಶ

ಮುಂಬೈ ಇಂಡಿಯನ್ಸ್ (MI) ತಂಡದ ಭದ್ರಕೋಟೆಯಾಗಿದ್ದ ವಾಂಖೆಡೆ ಕ್ರೀಡಾಂಗಣದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಎದುರಾಳಿ ತಂಡಗಳ ಪರವಾಗಿ ಅಭಿಮಾನಿಗಳು ಘೋಷಣೆ ಕೂಗುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಪ್ರದರ್ಶನ ನೀಡಲು ಪರದಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಮ್ಯಾಚ್ ನಡೆಯುವ ವೇಳೆ, ಕ್ರೀಡಾಂಗಣದಾದ್ಯಂತ 'ಆರ್‌ಸಿಬಿ' (RCB) ಪರವಾದ ಜೋರಾದ ಘೋಷಣೆಗಳು ಮತ್ತು ಧೋನಿ ಪರವಾದ ಹರ್ಷೋದ್ಗಾರಗಳು ಮೊಳಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರ ಬೆನ್ನಲ್ಲೇ ಮುಂಬೈ ಫ್ಯಾನ್ಸ್‌ಗೆ ಪೊಲ್ಲಾರ್ಡ್ ಈ ಸಂದೇಶ ರವಾನಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಆದ ಬಳಿಕ ಫ್ರಾಂಚೈಸಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಪೊಲ್ಲಾರ್ಡ್, ಮುಂಬೈ ತಂಡದಲ್ಲಿ ಮತ್ತೆ ಚೈತನ್ಯ ಹಾಗೂ ಹುರುಪನ್ನು ತುಂಬಲು ಬಯಸುವುದಾಗಿ ತಿಳಿಸಿದ್ದಾರೆ. ತಾವು ಅಭಿಮಾನಿಗಳಲ್ಲಿ ಉತ್ಸಾಹವನ್ನು ಮರುಜಾಗೃತಗೊಳಿಸುವ ಮೂಲಕ ಮತ್ತು ಕ್ರೀಡಾಂಗಣದಲ್ಲಿ ಹೆಚ್ಚು ನೀಲಿ ಬಣ್ಣದ ಉಡುಪು ಧರಿಸಿದ ಅಭಿಮಾನಿಗಳು ಕಾಣುವಂತೆ ಮಾಡುವ ಮೂಲಕ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

'ನಮ್ಮ ಮೊದಲ ಕೆಲಸವೆಂದರೆ ಆ ಶಕ್ತಿ ಮತ್ತು ಚೈತನ್ಯವನ್ನು ತರುವುದು. ನೀವು ವಾಂಖೆಡೆ ಕ್ರೀಡಾಂಗಣಕ್ಕೆ ಕಾಲಿಡುವಾಗ, ನಿಮಗೆ ಹಳದಿ ಮತ್ತು ಕೆಂಪು ಬಣ್ಣಗಳು ಕಾಣಿಸದಂತೆ ಮಾಡಬೇಕಿದೆ. ನೀವು ಆಗ ಇಡೀ ಸ್ಟೇಡಿಯಂನಾದ್ಯಂತ ಕೇವಲ ನೀಲಿ ಧ್ವಜ ಹಾರಾಡುವುದನ್ನು ನೋಡಲಿದ್ದೀರ. ಆ ರೀತಿಯ ಫ್ಯಾಷನ್ ನಮ್ಮ ಅಭಿಮಾನಿಗಳಲ್ಲಿ ಕಾಣುವಂತೆ ಮಾಡುತ್ತೇವೆ' ಎಂದು ಪೊಲ್ಲಾರ್ಡ್ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು ವಾಂಖಡೆಯಲ್ಲಿಯೇ ಗೆಲ್ಲಲು ಪರದಾಡುತ್ತಿದೆ. ಈ ಮೈದಾನದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಭರ್ಜರಿ ಪ್ರದರ್ಶನ ತೋರುತ್ತಿದ್ದು, ಅಭಿಮಾನಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಪೊಲ್ಲಾರ್ಡ್ ಮುಂಬರುವ ದಿನಗಳಲ್ಲಿ ಕೆಂಪು ಹಾಗೂ ಹಳದಿ ಬಾವುಟಗಳಿಗಿಂತ ಮುಂಬೈನ ನೀಲಿ ಬಾವುಟ ಸ್ಟೇಡಿಯಂನಲ್ಲಿ ಹಾರಾಡುವಂತೆ ಮಾಡಬೇಕು ಎಂದು ಫ್ಯಾನ್ಸ್ ಬಳಿ ಮನವರಿಕೆ ಮಾಡಿಕೊಂಡಿದ್ದಾರೆ.

ಪಾತಾಳಕ್ಕೆ ಕುಸಿದಿರುವ ಮುಂಬೈ ಇಂಡಿಯನ್ಸ್:

ಅಂದಹಾಗೆ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಾಗದದ ಮೇಲೆ ಬಲಿಷ್ಠವಾಗಿ ಗುರುತಿಸಿಕೊಂಡಿದ್ದರೂ ಕಳೆದ ಐದು ವರ್ಷಗಳಿಂದಲೂ ಕಪ್ ಗೆಲ್ಲಲು ಪರದಾಡುತ್ತಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಅವರಂತಹ ಭಾರತದ ಸ್ಟಾರ್ ಆಟಗಾರರ ದಂಡೇ ಇದೆ. ಹೀಗಿದ್ದೂ ಮುಂಬೈ ನೀರಸ ಪ್ರದರ್ಶನ ಮುಂದುವರೆಸಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಪೊಲ್ಲಾರ್ಡ್ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.