Asianet Suvarna News Asianet Suvarna News

Ind vs NZ: ಕಾನ್‌ವೇ-ಫಿಲಿಫ್ಸ್‌ ಭರ್ಜರಿ ಬ್ಯಾಟಿಂಗ್‌, ಟೀಂ ಇಂಡಿಯಾಗೆ ಸವಾಲಿನ ಗುರಿ..!

ಮೂರನೇ ಟಿ20 ಪಂದ್ಯ ಗೆಲ್ಲಲು ಭಾರತಕ್ಕೆ 161 ರನ್‌ಗಳ ಸವಾಲಿನ ಗುರಿ
ಆಕರ್ಷಕ ಅರ್ಧಶತಕ ಸಿಡಿಸಿದ ಡೆವೊನ್ ಕಾನ್‌ವೇ ಹಾಗೂ ಗ್ಲೆನ್ ಫಿಲಿಫ್ಸ್‌
ತಲಾ 4 ವಿಕೆಟ್ ಕಬಳಿಸಿ ಮಿಂಚಿದ ಆರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್

India vs New Zealand 3rd T20I Devon Conway Glenn Phillips fifty powers New Zealand Set 161 runs target to India kvn
Author
First Published Nov 22, 2022, 2:29 PM IST

ನೇಪಿಯರ್(ನ.22): ಮೊಹಮ್ಮದ್ ಸಿರಾಜ್ ಹಾಗೂ ಆರ್ಶದೀಪ್ ಸಿಂಗ್ ಮಾರಕ ದಾಳಿಯ ಹೊರತಾಗಿಯೂ, ವಿಕೆಟ್ ಕೀಪರ್ ಬ್ಯಾಟರ್‌ ಡೆವೊನ್ ಕಾನ್‌ವೇ ಹಾಗೂ ಗ್ಲೆನ್ ಫಿಲಿಫ್ಸ್‌ ಬಾರಿಸಿ ಸ್ಪೋಟಕ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ ತಂಡವು ಮೂರನೇ ಟಿ20 ಪಂದ್ಯದಲ್ಲಿ 160 ರನ್ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದೆ. ಭಾರತ ಪರ ಸಿರಾಜ್ ಹಾಗೂ ಆರ್ಶದೀಪ್ ತಲಾ 4 ವಿಕೆಟ್ ಪಡೆದರೆ, ಹರ್ಷಲ್‌ ಪಟೇಲ್ ಒಂದು ವಿಕೆಟ್ ಪಡೆದರು.

ಹೌದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಇಲ್ಲಿನ ಮೆಕ್‌ಲ್ಯಾನ್ ಪಾರ್ಕ್‌ ಮೈದಾನ ಆತಿಥ್ಯ ವಹಿಸಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ಹಂಗಾಮಿ ನಾಯಕ ಟಿಮ್ ಸೌಥಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ನ್ಯೂಜಿಲೆಂಡ್ ತಂಡವು ಉತ್ತಮ ಆರಂಭ ಪಡೆಯಲು ಎಡಗೈ ವೇಗಿ ಆರ್ಶದೀಪ್ ಸಿಂಗ್ ಅವಕಾಶ ನೀಡಲಿಲ್ಲ. ಸ್ಪೋಟಕ ಆರಂಭಿಕ ಬ್ಯಾಟರ್ ಫಿನ್ ಅಲೆನ್ ಕೇವಲ 3 ರನ್ ಬಾರಿಸಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ಕೇನ್ ವಿಲಿಯಮ್ಸನ್ ಬದಲಿಗೆ ತಂಡ ಕೂಡಿಕೊಂಡಿದ್ದ ಮಾರ್ಕ್‌ ಚಾಂಪ್ಮನ್‌ ಕೇವಲ 12 ರನ್ ಬಾರಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಆರ್ಶದೀಪ್‌ ಸಿಂಗ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಕಾನ್‌ವೇ-ಫಿಲಿಫ್ಸ್‌ ಜುಗಲ್ಬಂದಿ: ನ್ಯೂಜಿಲೆಂಡ್ ತಂಡವು ಪವರ್‌ ಪ್ಲೇನೊಳಗೆ 5.2 ಓವರ್‌ಗಳಲ್ಲಿ 44 ರನ್‌ ಬಾರಿಸಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮೂರನೇ ವಿಕೆಟ್‌ಗೆ 86 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ತಲುಪಿಸಿದರು. ಗ್ಲೆನ್ ಫಿಲಿಫ್ಸ್‌ 33 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಡೆವೊನ್ ಕಾನ್‌ವೇ 49 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 59 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

Ind vs NZ: ಭಾರತ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ, ಉಭಯ ತಂಡದಲ್ಲೂ ಒಂದು ಮಹತ್ವದ ಬದಲಾವಣೆ

ಕಿವೀಸ್ ಕಿವಿ ಹಿಂಡಿದ ವೇಗಿಗಳು: ಒಂದು ಹಂತದಲ್ಲಿ ನ್ಯೂಜಿಲೆಂಡ್ ತಂಡವು 15 ಓವರ್ ಅಂತ್ಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು 130 ರನ್ ಗಳಿಸುವ ಮೂಲಕ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಮಾರಕ ದಾಳಿ ನಡೆಸಿದ ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಆರ್ಶದೀಪ್ ಸಿಂಗ್ ತಲಾ 4 ವಿಕೆಟ್ ಕಬಳಿಸುವ ಮೂಲಕ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಕಿವೀಸ್‌ ಇನಿಂಗ್ಸ್‌ ಮುಗಿಸುವಲ್ಲಿ ವೇಗಿಗಳು ಯಶಸ್ವಿಯಾದರು. ಸಿರಾಜ್ 4 ಓವರ್‌ನಲ್ಲಿ ಕೇವಲ 17 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ಆರ್ಶದೀಪ್ ಸಿಂಗ್ 37 ರನ್ ನೀಡಿ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಹರ್ಷಲ್ ಪಟೇಲ್ ಒಂದು ವಿಕೆಟ್ ಪಡೆದರು.

Follow Us:
Download App:
  • android
  • ios