ಶಮಿ-ಬುಮ್ರಾ ಝಲಕ್, ನ್ಯೂಜಿಲೆಂಡ್ 235ಕ್ಕೆ ಆಲೌಟ್
ನ್ಯೂಜಿಲೆಂಡ್ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 235 ರನ್‌ಗಳಿಗೆ ಆಲೌಟ್ ಆಗಿದೆ. ಮೊಹಮ್ಮದ್ ಶಮಿ 4 ವಿಕೆಟ್ ಪಡೆದು ಮಿಂಚಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಕ್ರೈಸ್ಟ್‌ಚರ್ಚ್(ಮಾ.01): ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ 235 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತ ಮೊದಲ ಇನಿಂಗ್ಸ್‌ನಲ್ಲಿ 7 ರನ್‌ಗಳ ಮುನ್ನಡೆ ಸಾಧಿಸಿದೆ.
ಮೊದಲ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 63 ರನ್ ಬಾರಿಸಿದ್ದ ನ್ಯೂಜಿಲೆಂಡ್ ಎರಡನೇ ದಿನದಾಟದ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಬ್ಲಂಡೆಲ್ ತಮ್ಮ ಖಾತೆಗೆ ಒಂದು ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಇನ್ನು ಕೇನ್ ವಿಲಿಯಮ್ಸನ್(3) ಅವರನ್ನು ಬುಮ್ರಾ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಬಿಡಲಿಲ್ಲ. ಟೇಲರ್(15) ಹಾಗೂ ನೀಕೋಲ್ಸ್(14) ಸಹ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಲು ಸಾಧ್ಯವಾಗಲಿಲ್ಲ. ವಾಲ್ಟಿಂಗ್ ಶೂನ್ಯ ಸುತ್ತಿ ಬುಮ್ರಾಗೆ ಎರಡನೇ ಬಲಿಯಾದರು. ಟಾಮ್ ಲಾಥಮ್ 52 ರನ್ ಬಾರಿಸಿ ಶಮಿ ಬೌಲಿಂಗ್‌ನಲ್ಲಿ ಕ್ಲೀನ್ ಬೋಲ್ಡ್ ಆದರು. ಭಾರತ ಪರ 2ನೇ ಟೆಸ್ಟ್ ಪಂದ್ಯದಲ್ಲಿ ಮೂವರು ಅರ್ಧಶತಕ ಬಾರಿಸಿದರೆ, ಕಿವೀಸ್ ಪರ ದಾಖಲಾಗಿದ್ದು ಒಂದೇ ಅರ್ಧಶತಕವಾಗಿದೆ.
2ನೇ ಟೆಸ್ಟ್: ಕಿವೀಸ್‌ಗೆ ಮೊದಲ ದಿನದ ಗೌರವ
ಒಂದು ಹಂತದಲ್ಲಿ ನ್ಯೂಜಿಲೆಂಡ್ 153 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕೈಲ್ ಜಾಮಿಸನ್(49) ಹಾಗೂ ಕಾಲಿನ್ ಡಿ ಗ್ರಾಂಡ್‌ಹೋಮ್(26) ಕೆಲಕಾಲ ತಂಡಕ್ಕೆ ಆಸರೆಯಾದರು. ಇನ್ನು 9ನೇ ವಿಕೆಟ್‌ಗೆ ಜಾಮಿಸನ್ ಹಾಗೂ ನೀಲ್ ವ್ಯಾಗ್ನರ್(21) ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು. ಚೊಚ್ಚಲ ಅರ್ಧಶತಕದ ಕನವರಿಕೆಯಲ್ಲಿದ್ದ ಜಾಮಿಸನ್ 49 ರನ್ ಬಾರಿಸಿ ಶಮಿಗೆ ನಾಲ್ಕನೇ ಬಲಿಯಾದರು.
ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದು ಮಿಂಚಿದರೆ, ಜಸ್ಪ್ರೀತ್ ಬುಮ್ರಾ 3, ರವೀಂದ್ರ ಜಡೇಜಾ 2 ಹಾಗೂ ಉಮೇಶ್ ಯಾದವ್ ಒಂದು ವಿಕೆಟ್ ಪಡೆದರು. ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವುದು ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಿದೆ.