ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದ ರದ್ದುನಿರಂತರವಾಗಿ ಮಳೆ ಸುರಿದಿದ್ದರಿಂದ ಪಂದ್ಯ ರದ್ದುಗೊಳಿಸುವ ತೀರ್ಮಾನ ತೆಗೆದುಕೊಂಡ ಅಂಪೈರ್ಸ್‌ಸದ್ಯ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ನ್ಯೂಜಿಲೆಂಡ್
ವೆಲ್ಲಿಂಗ್ಟನ್(ನ.27): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಪದೇ ಪದೇ ಮಳೆರಾಯ ಅಡ್ಡಿಪಡಿಸಿದ್ದರಿಂದಾಗಿ ಈ ಪಂದ್ಯ ರದ್ದಾಗಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು ಸದ್ಯ 1-0 ಮುನ್ನಡೆ ಕಾಯ್ದುಕೊಂಡಿದೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಇಲ್ಲಿನ ಸೆಡನ್ ಪಾರ್ಕ್ ಮೈದಾನ ಆತಿಥ್ಯವನ್ನು ವಹಿಸಿತ್ತು. ಔಟ್ ಫೀಲ್ಡ್ ಕೊಂಚ ಒದ್ದೆಯಾಗಿದ್ದರಿಂದ ಟಾಸ್ ಕೂಡಾ 10 ನಿಮಿಷ ತಡವಾಗಿ ನಡೆಸಲಾಯಿತು. ಇನ್ನು ಇದಾದ ಬಳಿಕ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಪಂದ್ಯ ಆರಂಭವಾಗಿ ಮೊದಲ 4.5 ಓವರ್ ಆಗುತ್ತಿದ್ದಂತೆಯೇ ತುಂತುರು ಮಳೆ ಜೋರಾಗಿದ್ದರಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 22 ರನ್ ಕಲೆಹಾಕಿತ್ತು.
ಇದಾದ ಬಳಿಕ ಮಳೆ ಜೋರಾಗಿದ್ದರಿಂದ ಕೆಲ ಕಾಲ ಪಂದ್ಯ ಸ್ಥಗಿತವಾಯಿತು. ನಂತರ ಮಳೆ ನಿಂತ ಬಳಿಕ ತಲಾ 29 ಓವರ್‌ಗಳಿಗೆ ಪಂದ್ಯವನ್ನು ನಿಗದಿಗೊಳಿಸಲಾಯಿತು. ಮತ್ತೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ, ಆರನೇ ಓವರ್‌ನ ಮೊದಲ ಎಸೆತದಲ್ಲೇ ನಾಯಕ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಸೂರ್ಯ-ಗಿಲ್ ಜುಗಲ್ಬಂದಿ: ಕೇವಲ 23 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಶುಭ್‌ಮನ್ ಗಿಲ್ ಸ್ಪೋಟಕ ಜತೆಯಾಟವಾಡುವ ಮೂಲಕ ತಂಡದ ರನ್ ಗಳಿಕೆಗೆ ಚುರುಕು ಮುಟ್ಟಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ ಕೇವಲ 46 ಎಸೆತಗಳಲ್ಲಿ ಮುರಿಯದ 66 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಸಮೀಪ ಕೊಂಡೊಯ್ಯದರು. ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ 42 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 45 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 34 ರನ್ ಬಾರಿಸಿದರು.
Ind vs NZ: ಇಂಡೋ-ಕಿವೀಸ್ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ..! ಓವರ್ ಕಡಿತ?
ಮತ್ತೆ ಮಳೆ ಕಾಟ, ಪಂದ್ಯ ರದ್ದು: ಹೌದು, ಪಂದ್ಯದ 12.5 ಓವರ್ ವೇಳೆಗೆ ಮತ್ತೆ ಮಳೆ ಆರಂಭವಾಯಿತು. ಜೋರಾಗಿ ಮಳೆ ಸುರಿದಿದ್ದರಿಂದ ಕೆಲ ಕಾಲದ ಮಟ್ಟಿಗೆ ಪಂದ್ಯವನ್ನು ಮುಂದೂಡಲಾಯಿತು. ಮತ್ತೆ ಬಿಟ್ಟೂ ಬಿಡದೇ ಮಳೆ ಸುರಿದಿದ್ದರಿಂದ ಪರಿಸ್ಥಿತಿಯನ್ನು ಅವಲೋಕಿಸಿದ ಅಂಪೈರ್ ಹಾಗೂ ಮ್ಯಾಚ್ ರೆಫ್ರಿ ಈ ಪಂದ್ಯ ರದ್ದಾಗಿದೆ ಎಂದು ಘೋಷಿಸಿದರು.
ಸರಣಿ ಸಮಬಲ ಸಾಧಿಸಲು ಟೀಂ ಇಂಡಿಯಾಗೆ ಕೊನೆ ಚಾನ್ಸ್: ಭಾರತ ತಂಡವು ಆಕ್ಲೆಂಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 7 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ಸರಣಿಯಲ್ಲಿ ಹಿನ್ನಡೆ ಕಂಡಿದೆ. ಇದೀಗ ಎರಡನೇ ಪಂದ್ಯ ಮಳೆಯಿಂದ ರದ್ದಾಗಿದೆ. ಇನ್ನು ಸರಣಿ ಸಮಬಲ ಸಾಧಿಸಿ ಕಿವೀಸ್ ಪ್ರವಾಸವನ್ನು ಗೆಲುವಿನೊಂದಿಗೆ ಮುಕ್ತಾಯ ಮಾಡಲು ಶಿಖರ್ ಧವನ್‌ಗೆ ಕಡೆಯ ಅವಕಾಶವಿದೆ. ನವೆಂಬರ್ 30ರಂದು ನಡೆಯಲಿರುವ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದ್ದು, ಆ ಪಂದ್ಯ ಜಯಿಸಿದರಷ್ಟೇ ಸರಣಿ ಸಮಬಲವಾಗಲಿದೆ. ಇಲ್ಲದಿದ್ದರೇ ಏಕದಿನ ಸರಣಿ ಕಿವೀಸ್ ಪಾಲಾಗಲಿದೆ.
