Asianet Suvarna News Asianet Suvarna News

Ind vs NZ: ಇಂಡೋ-ಕಿವೀಸ್ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ..! ಓವರ್ ಕಡಿತ?

ಭಾರತ-ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ
ಇನಿಂಗ್ಸ್‌ನಲ್ಲಿ ಓವರ್‌ಗಳ ಸಂಖ್ಯೆ ಕಡಿತವಾಗುವ ಸಾಧ್ಯತೆ

Ind vs NZ 2nd ODI Rain stops India vs New Zealand play at Wellington kvn
Author
First Published Nov 27, 2022, 8:16 AM IST

ವೆಲ್ಲಿಂಗ್ಟನ್‌(ನ.27): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಆರಂಭವಾಗಿ ಕೆಲವೇ ನಿಮಿಷಗಳೊಳಗಾಗಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಎಚ್ಚರಿಕೆಯ ಅರಂಭ ಪಡೆದಿದೆ. ಇದರ ನಡುವೆ, 4.5 ಓವರ್‌ ಆಗುತ್ತಿದ್ದಂತೆಯೇ ತುಂತುರು ಮಳೆ ಜೋರಾಗಿದ್ದರಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನೂ ಕೆಲಕಾಲ ಪಂದ್ಯ ಆರಂಭವಾಗುವುದು ತಡವಾದರೇ ಓವರ್‌ಗಳ ಸಂಖ್ಯೆ ಕಡಿತ ಮಾಡುವ ಸಾಧ್ಯತೆಯಿದೆ

ಹೌದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನವೇ ಮಳೆರಾಯನ ಮುನ್ಸೂಚನೆ ಸಿಕ್ಕಿತ್ತು. ಪಿಚ್ ಕೊಂಚ ಒದ್ದೆಯಾಗಿದ್ದರಿಂದ ನಿಗದಿತ ಸಮಯಕ್ಕಿಂತ 10 ನಿಮಿಷ ತಡವಾಗಿ ಟಾಸ್ ನಡೆಸಲಾಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಪರ ನಾಯಕ ಶಿಖರ್ ಧವನ್ ಹಾಗೂ ಶುಭ್‌ಮನ್ ಗಿಲ್ ತಂಡಕ್ಕೆ ಎಚ್ಚರಿಕೆಯ ಆರಂಭ ಒದಗಿಸುವತ್ತ ದಿಟ್ಟ ಹೆಜ್ಜೆಯಿಟ್ಟರು. ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಶುಭ್‌ಮನ್‌ ಗಿಲ್‌ 21 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 19 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ನಾಯಕ ಶಿಖರ್ ಧವನ್ 8 ಎಸೆತಗಳನ್ನು ಎದುರಿಸಿ 2 ರನ್ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವು ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೇ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಮುಗ್ಗರಿಸಿರುವ ಟೀಂ ಇಂಡಿಯಾ ಪಾಲಿಗೆ ಎರಡನೇ ಪಂದ್ಯದಲ್ಲಿ ಗೆಲುವು ಅನಿವಾರ್ಯ ಎನಿಸಿದೆ. ಹೀಗಾಗಿ ಭಾರತ ತಂಡವು ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದು. ಸಂಜು ಸ್ಯಾಮ್ಸನ್ ಹಾಗೂ ಶಾರ್ದೂಲ್ ಠಾಕೂರ್‌ಗೆ ವಿಶ್ರಾಂತಿ ನೀಡಲಾಗಿದ್ದು, ದೀಪಕ್ ಹೂಡಾ ಹಾಗೂ ದೀಪಕ್ ಚಹರ್‌ಗೆ ಮಣೆ ಹಾಕಲಾಗಿದೆ

ತಂಡಗಳು ಹೀಗಿವೆ ನೋಡಿ

ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್‌ವೇ, ಕೇನ್ ವಿಲಿಯಮ್ಸನ್(ನಾಯಕ), ಡೇರಲ್ ಮಿಚೆಲ್, ಟಾಮ್ ಲೇಥಮ್(ವಿಕೆಟ್‌ ಕೀಪರ್), ಗ್ಲೆನ್ ಫಿಲಿಫ್ಸ್, ಮಿಚೆಲ್ ಸ್ಯಾಂಟ್ನರ್, ಮೈಕಲ್ ಬ್ರಾಸ್‌ವೆಲ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್.

ಭಾರತ ತಂಡ: ಶಿಖರ್ ಧವನ್(ನಾಯಕ), ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಉಮ್ರಾನ್ ಮಲಿಕ್, ಆರ್ಶದೀಪ್ ಸಿಂಗ್.


 

Follow Us:
Download App:
  • android
  • ios