ವೆಲ್ಲಿಂಗ್ಟನ್(ಫೆ.21): ಕೈಲ್ ಜಾಮಿಸನ್ ಮಾರಕ ದಾಳಿಕ ತತ್ತರಿಸಿದ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ. ಸದ್ಯ 41.1 ಓವರ್‌ಗಳಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 101 ರನ್ ಬಾರಿಸಿದ್ದು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬೌಲಿಂಗ್ ಮಾಡಲು ತೀರ್ಮಾನಿಸಿತು. ನಾಯಕ ತೀರ್ಮಾನವನ್ನು ಸಮರ್ಥಿಸುವಂತೆ ದಾಳಿ ನಡೆಸಿದ ಕಿವೀಸ್ ಬೌಲರ್‌ಗಳು  ಭಾರತಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪೃಥ್ವಿ ಶಾ 16 ರನ್ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರೆ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಕೇವಲ 11 ರನ್‌ಗಳಿಗೆ ಸೀಮಿತವಾಯಿತು. ಇನ್ನು ನಾಯಕ ವಿರಾಟ್ ಕೊಹ್ಲಿ ಕೇವಲ 2 ರನ್‌ಗಳಿಸಿ ಜಾಮಿಸನ್‌ಗೆ ಎರಡನೇ ಬಲಿಯಾದರು.

ಪ್ರತಿರೋಧ ತೋರಿದ ಮಯಾಂಕ್: ಒಂದು ಹಂತದಲ್ಲಿ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡುವ ಮೂಲಕ ಮಯಾಂಕ್ ಅಗರ್‌ವಾಲ್ ಕಿವೀಸ್ ದಾಳಿಗೆ ಕೊಂಚ ಪ್ರತಿರೋಧ ತೋರಿದರು. ಮಯಾಂಕ್ 84 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 34 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರಹಾನೆ ಜತೆ ನಾಲ್ಕನೇ ವಿಕೆಟ್‌ಗೆ ಮಯಾಂಕ್ 44 ರನ್‌ಗಳ ಜತೆಯಾಟವಾಡಿದರು. ಇದೀಗ ಉಪನಾಯಕ ರಹಾನೆ(28) ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ: ವರ್ಷದ ಬಳಿಕ ಪೃಥ್ವಿ ಶಾ ತಂಡ ಕೂಡಿಕೊಂಡಿದ್ದಾರೆ. ಇನ್ನುಳಿದಂತೆ ಹನುಮ ವಿಹಾರಿ, ಪಂತ್, ಅಶ್ವಿನ್ ಹಾಗೂ ಇಶಾಂತ್ ಶರ್ಮಾ ತಂಡಕ್ಕೆ ಮರಳಿದ್ದಾರೆ.
ನ್ಯೂಜಿಲೆಂಡ್ ತಂಡದಲ್ಲಿ ರಾಸ್ ಟೇಲರ್ 100ನೇ ಪಂದ್ಯವನ್ನಾಡುತ್ತಿದ್ದಾರೆ. ಇನ್ನು ಕೈಲ್ ಜಾಮಿಸನ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.