* ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲುವಿನತ್ತ ದಾಪುಗಾಲು* ನಾಲ್ಕನೇ ದಿನದಾಟದಲ್ಲಿ ಭಾರತಕ್ಕೆ ತಿರುಗೇಟು ನೀಡಿದ ಇಂಗ್ಲೆಂಡ್* ನಿರ್ಣಾಯಕ ದಿನದಾಟದ ಮೇಲೆ ಎಲ್ಲರ ಚಿತ್ತ

ಬರ್ಮಿಂಗ್‌ಹ್ಯಾಮ್‌(ಜು.05): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಟೆಸ್ಟ್ ಪಂದ್ಯವು ನಿರ್ಣಾಯಕ ಘಟ್ಟ ತಲುಪಿದ್ದು, ಆತಿಥೇಯ ಇಂಗ್ಲೆಂಡ್ ತಂಡವು ಗೆಲುವಿನತ್ತ ದಾಪುಗಾಲಿಡಲಾರಂಭಿಸಿದೆ. ಭಾರತ ನೀಡಿರುವ 378 ರನ್‌ಗಳ ಸವಾಲಿನ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ ಕೇವಲ 3 ವಿಕೆಟ್ ಕಳೆದುಕೊಂಡು 259 ರನ್ ಬಾರಿಸಿದ್ದು, ಕೊನೆಯ ದಿನ ಗೆಲ್ಲಲು ಕೇವಲ 119 ರನ್‌ಗಳ ಅಗತ್ಯವಿದೆ. ಇದೇ ಸಂದರ್ಭದಲ್ಲಿ ಭಾರತಕ್ಕೆ ವರುಣರಾಯ ಕೊನೆಯ ದಿನ ನೆರವಿಗೆ ಬರುತ್ತಾನಾ ಎನ್ನುವ ನಿರೀಕ್ಷೆ ಕೂಡಾ ಹುಸಿಯಾಗುವ ಸಾಧ್ಯತೆ ದಟ್ಟವಾಗಿದೆ.

ಹೌದು, ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳ ನಡುವೆ ಎಜ್‌ಬಾಸ್ಟನ್‌ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಮೊದಲೆರಡು ದಿನದ ಪಂದ್ಯಾಟಕ್ಕೆ ವರುಣರಾಯ ಅಡ್ಡಿಪಡಿಸಿದ್ದ. ಹೀಗಾಗಿ ಕೊನೆಯ ದಿನದಾಟದಲ್ಲಿ ಒಂದು ವೇಳೆ ಸಂಪೂರ್ಣ ಮಳೆಗೆ ಆಹುತಿಯಾದರೇ ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಯು ಭಾರತದ ಪಾಲಾಗಲಿದೆ. ಆದರೆ ಸದ್ಯದ ಹವಾಮಾನವನ್ನು ಗಮನಿಸಿದರೇ, ಮಳೆ ಕೂಡಾ ಇಂದು ಭಾರತದ ನೆರವಿಗೆ ಬರುವುದು ಕಷ್ಟಸಾಧ್ಯ ಎನ್ನುವಂತಾಗಿದೆ.

ಸದ್ಯ ಇಂಗ್ಲೆಂಡ್ ತಂಡವು ಮೈಚಳಿ ಬಿಟ್ಟು ಬ್ಯಾಟ್ ಬೀಸುತ್ತಿದ್ದು, ಆದಷ್ಟು ಬೇಗ ತಂಡವನ್ನು ಗೆಲುವಿನ ದಡ ಸೇರಿಸಲು ಎದುರು ನೋಡುತ್ತಿದೆ. ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ (Joe Root) 76 ಹಾಗೂ ಜಾನಿ ಬೇರ್‌ಸ್ಟೋವ್ 72 ಕೊನೆಯ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 4 ಪಂದ್ಯಗಳ ಮುಕ್ತಾಯದ ವೇಳೆಗೆ ಭಾರತ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತ್ತು. ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತೀಯ ಪಾಳಯದಲ್ಲಿ ಕೋವಿಡ್‌ ಕಾಣಿಸಿಕೊಂಡಿದ್ದರಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಮುಂದೂಡಲಾಗಿತ್ತು. ಇದೀಗ ಜುಲೈ 01ರಿಂದ ಆರಂಭವಾಗಿರುವ ಬರ್ಮಿಂಗ್‌ಹ್ಯಾಮ್‌ ಟೆಸ್ಟ್ ಪಂದ್ಯದ ಮೊದಲ ಮೂರು ದಿನವೂ ಟೀಂ ಇಂಡಿಯಾ (Team India), ಆತಿಥೇಯ ಇಂಗ್ಲೆಂಡ್ ಎದುರು ಪ್ರಾಬಲ್ಯ ಮೆರೆದಿತ್ತು. ಆದರೆ ನಾಲ್ಕನೇ ದಿನ ಇಂಗ್ಲೆಂಡ್ ತಂಡವು ಭಾರತಕ್ಕೆ ತಿರುಗೇಟು ನೀಡುವ ಮೂಲಕ ಗೆಲುವಿನತ್ತ ದಾಪುಗಾಲಿಡಲಾರಂಭಿಸಿದೆ.

ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನ ಕೊನೆಯ ದಿನಕ್ಕಿಲ್ಲ ಮಳೆ ಭೀತಿ..!

ಬರ್ಮಿಂಗ್‌ಹ್ಯಾಮ್ ಟೆಸ್ಟ್‌ (Birmingham Test) ಪಂದ್ಯದ ಐದನೇ ದಿನದಾಟಕ್ಕೂ ಮುನ್ನ ಇಂಗ್ಲೆಂಡ್ ಅಭಿಮಾನಿಗಳ ಪಾಲಿಗೆ ಗುಡ್‌ ನ್ಯೂಸ್ ಸಿಕ್ಕಿದ್ದು, ಎಜ್‌ಬಾಸ್ಟನ್ ಮೈದಾನದಲ್ಲಿ ಮಳೆ ಬರುವ ಸಾಧ್ಯತೆಗಳಿಲ್ಲ ಎಂದು ತಿಳಿದು ಬಂದಿದೆ. ಹವಾಮಾನ ವರದಿಯ ಪ್ರಕಾರ, 5ನೇ ದಿನದಾಟದ ಸಂದರ್ಭದಲ್ಲಿ ತಂಪಾದ ಹಾಗೂ ಆಡಲು ಒಳ್ಳೆಯ ವಾತಾವರಣವಿರಲಿದೆ ಎಂದು ತಿಳಿಸಲಾಗಿದೆ. 5ನೇ ದಿನದಾಟದ ವೇಳೆ 20 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಇರಲಿದೆ. ಮೈದಾನದ ಸುತ್ತಮುತ್ತ ಶೇ 26% ಮೋಡ ಇರಲಿದೆ. ಹೀಗಾಗಿ ಟೀಂ ಇಂಡಿಯಾ ಮಳೆಯನ್ನು ನೆಚ್ಚಿಕೊಳ್ಳದೇ ಮಾರಕ ಬೌಲಿಂಗ್ ದಾಳಿ ನಡೆಸಿ ಇಂಗ್ಲೆಂಡ್‌ನ ಉಳಿದ 7 ವಿಕೆಟ್ ಕಬಳಿಸಿದರಷ್ಟೇ ಟೆಸ್ಟ್ ಸರಣಿ ಭಾರತದ ಪಾಲಾಗಲಿದೆ.

Birmingham Test ಭಾರತೀಯರ ಮೇಲೆ ಇಂಗ್ಲೆಂಡ್‌ ಫ್ಯಾನ್ಸ್‌ ಜನಾಂಗೀಯ ನಿಂದನೆ..!

ಇಂದು ಕ್ರೀಡಾಂಗಣಕ್ಕೆ ಉಚಿತ ಪ್ರವೇಶ!: ಇಂಗ್ಲೆಂಡ್‌ ವಿರುದ್ಧ ಐತಿಹಾಸಿಕ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತಕ್ಕೆ ಅಂತಿಮ ದಿನದಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳ ಬೆಂಬಲ ಸಿಗಲಿದೆ. 5ನೇ ಹಾಗೂಅಂತಿಮ ದಿನದಾಟಕ್ಕೆ ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಎಜ್‌ಬಾಸ್ಟನ್‌ ಕ್ರೀಡಾಂಗಣ ಭಾರತೀಯ ಅಭಿಮಾನಿಗಳಿಂದ ತುಂಬಿ ತುಳುಕುವ ನಿರೀಕ್ಷೆ ಇದೆ.