ಚೆನ್ನೈ(ಫೆ.13): ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸ್ಥಾನ ಗಳಿಸಬೇಕಿದ್ದರೆ ಭಾರತ, ಶನಿವಾರದಿಂದ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ನಲ್ಲಿ ಸಕಾರಾತ್ಮಕ ಫಲಿತಾಂಶ ಗಳಿಸಬೇಕಿದೆ. ವಿರಾಟ್‌ ಕೊಹ್ಲಿ ಪಡೆಗಿನ್ನು ಸರಣಿಯಲ್ಲಿ 3 ಪಂದ್ಯ ಬಾಕಿ ಇದ್ದು, ಕನಿಷ್ಠ 2ರಲ್ಲಿ ಗೆಲ್ಲಲೇಬೇಕಿದೆ. ಬಹಳ ಮುಖ್ಯವಾಗಿ ಯಾವುದೇ ಪಂದ್ಯದಲ್ಲಿ ಸೋಲುವಂತಿಲ್ಲ.

ಆಸ್ಪ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಗೆದ್ದು ಬೀಗುತ್ತಿದ್ದ ಭಾರತಕ್ಕೆ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಚಳಿ ಬಿಡಿಸಿದೆ. ಭಾರತ ತಂಡದಲ್ಲೀಗ ಕೆಲ ಪ್ರಮುಖ ಸಮಸ್ಯೆಗಳು ಮತ್ತೆ ಗೋಚರಿಸಿದ್ದು, ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ತುರ್ತಾಗಿ ಪರಿಹಾರ ಹುಡುಕಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಕಳೆದ ಪಂದ್ಯದಲ್ಲಿ ಪರಿಣಾಮಕಾರಿಯಾಗದ ಶಾಬಾಜ್‌ ನದೀಂ ಬದಲಿಗೆ ಅಕ್ಷರ್‌ ಪಟೇಲ್‌ರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಚೆಪಾಕ್‌ ಪಿಚ್‌ ಹೆಚ್ಚು ಸ್ಪಿನ್‌ ಸ್ನೇಹಿಯಾಗಿರಲಿದ್ದು, ಬ್ಯಾಟಿಂಗ್‌ ಬಲ ಹೆಚ್ಚಿಸಿಕೊಳ್ಳಬೇಕಿದೆ. ಹೀಗಾಗಿ ವಾಷಿಂಗ್ಟನ್‌ ಸುಂದರ್‌ ಬದಲಿಗೆ ಹಾರ್ದಿಕ್‌ ಪಾಂಡ್ಯ ಆಡಬಹುದು. ಕುಲ್ದೀಪ್‌ ಯಾದವ್‌ಗೆ ಸ್ಥಾನ ಕೊಡಲಾಗುತ್ತಾ ಎನ್ನುವ ಕುತೂಹಲ ಟಾಸ್‌ ವರೆಗೂ ಮುಂದುವರಿಯಲಿದೆ.

2ನೇ ಟೆಸ್ಟ್‌ಗೆ ಬಲಿಷ್ಠ ಇಂಗ್ಲೆಂಡ್‌ ತಂಡ ಪ್ರಕಟ; 4 ಮಹತ್ವದ ಬದಲಾವಣೆ..!

ಸ್ಪಿನ್‌ ಪಿಚ್‌ ತಿರುಗುಬಾಣ?: ಚೆಪಾಕ್‌ ಪಿಚ್‌ನಲ್ಲಿ ಮೊದಲ ದಿನದಿಂದಲೇ ಚೆಂಡು ಹೆಚ್ಚು ಸ್ಪಿನ್‌ ಆಗುವ ನಿರೀಕ್ಷೆ ಇದೆ. ಮೊದಲ ಪಂದ್ಯಕ್ಕೆ ಸಿದ್ಧಪಡಿಸಿದ್ದ ಪಿಚ್‌ ಭಾರತಕ್ಕೆ ನೆರವಾಗಿರಲಿಲ್ಲ. ಕೊನೆ 2-3 ದಿನದಿಂದ ಪಿಚ್‌ಗೆ ನೀರುಣಿಸದ ಕಾರಣ ಬಹಳ ಬೇಗ ಪಿಚ್‌ ಬಿರುಕು ಬಿಡಲು ಶುರುವಾಗುತ್ತದೆ. 2012ರಲ್ಲಿ ಇಂಗ್ಲೆಂಡ್‌ ವಿರುದ್ಧ ಮುಂಬೈ ಟೆಸ್ಟ್‌, 2017ರಲ್ಲಿ ಆಸ್ಪ್ರೇಲಿಯಾ ವಿರುದ್ಧ ಪುಣೆ ಟೆಸ್ಟ್‌ನಲ್ಲಿ ಭಾರತ ಇಂತದ್ದೇ ಸಂಪೂರ್ಣ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಪಡಿಸಿ ತಾನೇ ತೋಡಿದ ಖೆಡ್ಡಕ್ಕೆ ಬಿದ್ದಿತ್ತು. 2012ರಲ್ಲಿ ಕೆವಿನ್‌ ಪೀಟರ್‌ಸನ್‌, 2017ರಲ್ಲಿ ಸ್ಟೀವ್‌ ಸ್ಮಿತ್‌ ಭಾರತಕ್ಕೆ ಭಾರೀ ಪೆಟ್ಟು ನೀಡಿದ್ದರು. ಈ ಪಂದ್ಯದಲ್ಲೂ ಅದು ಪುನರಾವರ್ತನೆಯಾಗಲಿದೆಯೇ ಎನ್ನುವ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.

ಟಾಸ್‌ ನಿರ್ಣಾಯಕ ಪಾತ್ರ ವಹಿಸಲಿದ್ದು, ಟಾಸ್‌ ಗೆದ್ದರೆ ಮೊದಲು ಬ್ಯಾಟ್‌ ಮಾಡಲು ಕೊಹ್ಲಿ ನಿರ್ಧರಿಸಿದರೆ ಅಚ್ಚರಿಯಿಲ್ಲ. ರೋಹಿತ್‌ ಶರ್ಮಾ, ಅಜಿಂಕ್ಯ ರಹಾನೆ, ರಿಷಭ್‌ ಪಂತ್‌ರಿಂದ ಹೆಚ್ಚಿನ ಜವಾಬ್ದಾರಿ ನಿರೀಕ್ಷಿಸಲಾಗಿದೆ. ಚೇತೇಶ್ವರ್‌ ಪೂಜಾರ ಎಂದಿನಂತೆ ಎದುರಾಳಿ ಬೌಲರ್‌ಗಳನ್ನು ಸುಸ್ತಾಗಿಸುವ ಕೆಲಸ ಮುಂದುವರಿಸಬೇಕಿದೆ. ಅಶ್ವಿನ್‌ ಹಾಗೂ 2ನೇ ಸ್ಪಿನ್ನರ್‌ ಪ್ರದರ್ಶನದ ಮೇಲೆ ಪಂದ್ಯದ ಫಲಿತಾಂಶ ನಿಲ್ಲಲಿದೆ. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಮಾಡಿದ ಕೊಹ್ಲಿ, ಈ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್‌ ಮೇಲೆ ಕಣ್ಣಿಟ್ಟಿದ್ದಾರೆ.

ಆ್ಯಂಡರ್‌ಸನ್‌, ಬೆಸ್‌ಗೆ ವಿಶ್ರಾಂತಿ: ನಿರೀಕ್ಷೆಯಂತೆ ಇಂಗ್ಲೆಂಡ್‌ ತಂಡದಲ್ಲಿ 4 ಬದಲಾವಣೆ ಮಾಡಲಾಗಿದೆ. ತಂಡ ಶುಕ್ರವಾರ ಅಂತಿಮ 12ರ ಪಟ್ಟಿಪ್ರಕಟಿಸಿತು. ಆ್ಯಂಡರ್‌ಸನ್‌, ಬೆಸ್‌, ಬಟ್ಲರ್‌ಗೆ ವಿಶ್ರಾಂತಿ ನೀಡಲಾಗಿದೆ. ಆರ್ಚರ್‌ ಗಾಯಗೊಂಡು ಹೊರಬಿದ್ದಿದ್ದಾರೆ. ಬ್ರಾಡ್‌, ವೋಕ್ಸ್‌, ಸ್ಟೋನ್‌, ಫೋಕ್ಸ್‌ ಹಾಗೂ ಮೋಯಿನ್‌ ಅಲಿ ಅವಕಾಶ ಪಡೆದಿದ್ದಾರೆ. ಅತ್ಯುತ್ತಮ ಲಯದಲ್ಲಿರುವ ಜೋ ರೂಟ್‌ ಅಬ್ಬರಿಸಿದರೆ ಭಾರತಕ್ಕೆ ಮತ್ತೊಂದು ಸೋಲು ಕಟ್ಟಿಟ್ಟಬುತ್ತಿ. ಕೋವಿಡ್‌ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ಸಿಗುತ್ತಿದೆ. ಚೆನ್ನೈ ಅಭಿಮಾನಿಗಳು ಭಾರತ ತಂಡವನ್ನು ಹುರಿದುಂಬಿಸಲು ಕಾತರಿಸುತ್ತಿದ್ದಾರೆ.

ಪಿಚ್‌ ರಿಪೋರ್ಟ್‌

ಚೆಪಾಕ್‌ ಪಿಚ್‌ ಸಂಪೂರ್ಣವಾಗಿ ಸ್ಪಿನ್‌ ಸ್ನೇಹಿಯಾಗಿರಲಿದ್ದು, ಮೊದಲ ದಿನದಿಂದಲೇ ಚೆಂಡು ಹೆಚ್ಚಿನ ತಿರುವು ಪಡೆಯುವ ನಿರೀಕ್ಷೆ ಇದೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡಲಿದೆ. ಪಿಚ್‌ ಬೇಗ ಬಿರುಕು ಬಿಡಲಿದ್ದು, 4 ಹಾಗೂ 5ನೇ ದಿನದಂದು ಬ್ಯಾಟ್‌ ಮಾಡುವುದು ಕಷ್ಟ.

ಸಂಭವನೀಯ ಆಟಗಾರರು

ಭಾರತ: ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ವಾಷಿಂಗ್ಟನ್‌/ಹಾರ್ದಿಕ್‌, ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌, ಇಶಾಂತ್‌/ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌: ಡಾಮ್‌ ಸಿಬ್ಲಿ, ರೋರಿ ಬನ್ಸ್‌ರ್‍, ಜೋ ರೂಟ್‌(ನಾಯಕ), ಡ್ಯಾನ್‌ ಲಾರೆನ್ಸ್‌, ಬೆನ್‌ ಸ್ಟೋಕ್ಸ್‌, ಓಲಿ ಪೋಪ್‌, ಮೋಯಿನ್‌ ಅಲಿ, ಬೆನ್‌ ಫೋಕ್ಸ್‌, ಕ್ರಿಸ್‌ ವೋಕ್ಸ್‌/ಓಲಿ ಸ್ಟೋನ್‌, ಸ್ಟುವರ್ಟ್‌ ಬ್ರಾಡ್‌, ಜ್ಯಾಕ್‌ ಲೀಚ್‌.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್