ಚೆನ್ನೈ(ಜ.31): ಇಂಗ್ಲೆಂಡ್‌ ತಂಡದ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌, ಜೋಫ್ರಾ ಆರ್ಚರ್‌ ಹಾಗೂ ರೋರಿ ಬರ್ನ್ಸ್‍, ಶನಿವಾರ ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದರು. 6 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿದ ಈ ಮೂವರು ಆಟಗಾರರು ಅಂಗಳಿಕ್ಕಿಳಿದರು. 

ಶ್ರೀಲಂಕಾ ಪ್ರವಾಸಕ್ಕೆ ಈ ಮೂವರು ಆಟಗಾರರು ತೆರಳಿರಲಿಲ್ಲ. ಹೀಗಾಗಿ 4 ದಿನಗಳ ಮುಂಚಿತವಾಗಿ ಭಾರತ ಪ್ರವಾಸ ಕೈಗೊಂಡಿದ್ದರು. ಜನವರಿ 25ರಂದು ಸ್ಟೋಕ್ಸ್‌, ಆರ್ಚರ್‌, ಬರ್ನ್ಸ್ ಭಾರತಕ್ಕೆ ಬಂದಿಳಿದಿದ್ದರು. ನಾಯಕ ಜೋ ರೂಟ್‌ ಸೇರಿದಂತೆ ಇಂಗ್ಲೆಂಡ್‌ ತಂಡದ ಉಳಿದ ಆಟಗಾರರು ಫೆಬ್ರವರಿ 2 ರಿಂದ ಅಭ್ಯಾಸ ನಡೆಸಲಿದ್ದಾರೆ. ಸದ್ಯ ಕ್ವಾರಂಟೈನ್‌ನಲ್ಲಿರುವ ಇಂಗ್ಲೆಂಡ್‌ ತಂಡದ ಎಲ್ಲಾ ಆಟಗಾರರ 2ನೇ ಪರೀಕ್ಷಾ ವರದಿ ಬಂದಿದ್ದು ಯಾರಿಗೂ ಕೊರೋನಾ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ. ರೂಟ್‌ ಸೇರಿದಂತೆ ತಂಡದ ಬಹುತೇಕ ಆಟಗಾರರು ಕೇವಲ 3 ದಿನಗಳ ಅಭ್ಯಾಸ ಮಾತ್ರ ನಡೆಸಲಿದ್ದಾರೆ. 

ಟೀಂ ಇಂಡಿಯಾ ಕ್ರಿಕೆಟಿಗರ ಕೋವಿಡ್ ಟೆಸ್ಟ್ ರಿಪೋರ್ಟ್ ಔಟ್‌..!

ಫೆಬ್ರವರಿ 5ರಿಂದ ಭಾರತ ವಿರುದ್ಧದ 4 ಟೆಸ್ಟ್‌ ಪಂದ್ಯಗಳ ಸರಣಿ ಆರಂಭವಾಗಲಿದೆ. ಸರಣಿಯ ಮೊದಲೆರಡು ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದ್ದು, ನಂತರದ 2 ಪಂದ್ಯಗಳಿಗೆ ಅಹಮದಾಬಾದ್‌ ಆತಿಥ್ಯ ವಹಿಸಲಿದೆ.