* ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ* ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಎರಡೇ ಏಕದಿನ ಪಂದ್ಯ* ಈಗಾಗಲೇ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ
ಲಂಡನ್(ಜು.14): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಣಸಾಟ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳ ತಲುಪಿದ್ದು, ಗುರುವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳಲು ರೋಹಿತ್ ಶರ್ಮಾ ಪಡೆ ಎದುರು ನೋಡುತ್ತಿದೆ. ಟಿ20 ಸರಣಿಯಲ್ಲಿ ಪ್ರಾಬಲ್ಯ ಮೆರೆದಿದ್ದ ಭಾರತ, ಮೊದಲ ಏಕದಿನದಲ್ಲಿ ವಿಶ್ವ ಚಾಂಪಿಯನ್ನರನ್ನು ಹೊಸಕಿ ಹಾಕಿತ್ತು. ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ ತನ್ನ ಲಯ ಮುಂದುವರಿಸಲು ಎದುರು ನೋಡುತ್ತಿದ್ದರೆ, ಇಂಗ್ಲೆಂಡ್ ಸಮಬಲ ಸಾಧಿಸಿ ಮುಖ ಉಳಿಸಿಕೊಳ್ಳಲು ಕಾತರಿಸುತ್ತಿದೆ.
ಜಸ್‌ಪ್ರೀತ್ ಬುಮ್ರಾ ಹೆಸರು ಕೇಳಿದರೆ ಇಂಗ್ಲೆಂಡ್ ಬ್ಯಾಟರ್‌ಗಳು ನಿದ್ದೆಯಲ್ಲೂ ಬೆಚ್ಚಿ ಬೀಳುವಂತಾಗಿದ್ದು, ವಿಶ್ವ ನಂ.1 ಸ್ಥಾನಕ್ಕೆ ಮರಳಿರುವ ಬುಮ್ರಾ ಮತ್ತೊಮ್ಮೆ ಭಾರತದ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದು, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ ಬೆಂಬಲಿಸಲಿದ್ದಾರೆ. ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ರವೀಂದ್ರ ಜಡೇಜಾ ಸ್ಥಾನ ಉಳಿಸಿಕೊಳ್ಳುವುದು ಖಚಿತ.
ಇನ್ನು ರೋಹಿತ್ ಶರ್ಮಾ ಅಬ್ಬರದ ಫಾರ್ಮ್ ಭಾರತಕ್ಕೆ ಮತ್ತಷ್ಟು ಬಲ ತುಂಬಿದ್ದು, ಶಿಖರ್ ಧವನ್ ಸಹ ಭರವಸೆ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ ಈ ಪಂದ್ಯಕ್ಕೂ ಅನುಮಾನವೆನಿಸಿದ್ದು ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮಧ್ಯಮ ಕ್ರಮಾಂಕದ ಜವಾಬ್ದಾರಿ ಹೊರಲಿದ್ದಾರೆ.'
ಇನ್ನೂ ಚೇತರಿಕೆ
ಕಾಣದ ವಿರಾಟ್ ಕೊಹ್ಲಿ: ಲಯದ ಸಮಸ್ಯೆ ಎದುರಿಸುತ್ತಿರುವ ವಿರಾಟ್ ಕೊಹ್ಲಿಗೆ ಗಾಯದ ಸಮಸ್ಯೆಯೂ (Virat Kohli Injury) ಕಾಡುತ್ತಿದ್ದು, ಅವರು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅವರು 2ನೇ ಏಕದಿನ ಪಂದ್ಯಕ್ಕೂ ಆಯ್ಕೆಗೆ ಲಭ್ಯರಿಲ್ಲ ಎನ್ನಲಾಗಿದೆ. 3ನೇ ಟಿ20 ವೇಳೆ ಕೊಹ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು.
ಇಂಗ್ಲೆಂಡ್ ಎದುರಿನ 2ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಮಹತ್ತರ ಬದಲಾವಣೆ?
ಇಂಗ್ಲೆಂಡ್ ಬ್ಯಾಟರ್‌ಗಳು, ಬೌಲರ್‌ಗಳು ನಿರಂತರವಾಗಿ ಒತ್ತಡಕ್ಕೆ ಸಿಲುಕುತ್ತಿದ್ದು, ಇದರ ಲಾಭವೆತ್ತಲು ಭಾರತ ಇನ್ನಷ್ಟು ರಣತಂತ್ರಗಳನ್ನು ಹೂಡಲಿದೆ. ಒತ್ತಡ ಬದಿಗೊತ್ತಿ ಪುಟಿದೇಳುವುದು ಅಷ್ಟು ಸುಲಭವಲ್ಲವಾದರೂ ಇಂಗ್ಲೆಂಡ್ ಇಂತಹ ಸವಾಲುಗಳನ್ನು ಮೆಟ್ಟಿನಿಂತೇ ವಿಶ್ವ ಚಾಂಪಿಯನ್ ಆಗಿರುವುದು ಎನ್ನುವುದನ್ನು ಮರೆಯುವ ಹಾಗಿಲ್ಲ. ಹೀಗಾಗಿ ಜೋಸ್ ಬಟ್ಲರ್ ಪಡೆಯನ್ನು ಭಾರತ ಲಘುವಾಗಿ ಪರಿಗಣಿಸದೆ ತನ್ನ ಬಲಾಬಲವನ್ನು ನಂಬಿ ಆಡಬೇಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಯುಜುವೇಂದ್ರ ಚಹಲ್.
ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೇರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಡೇವಿಡ್ ವಿಲ್ಲಿ, ಬ್ರೈಡನ್ ಕಾರ್ಸ್, ಕ್ರೇಗ್ ಓವರ್‌ಟನ್, ರೀಸ್ ಟಾಪ್ಲಿ.
ಸ್ಥಳ: ಲಾರ್ಡ್ಸ್ ಕ್ರೀಡಾಂಗಣ, ಲಂಡನ್
ಸಮಯ: ಸಂಜೆ 5.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್
ಪಿಚ್ ರಿಪೋರ್ಚ್
ಲಾರ್ಡ್ಸ್ ಪಿಚ್‌ನಲ್ಲಿ ರನ್ ಹೊಳೆ ಹರಿದ ಉದಾಹರಣೆಗಳು ಕಡಿಮೆ. ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 238, 2ನೇ ಇನ್ನಿಂಗ್‌್ಸನ ಸರಾಸರಿ ಮೊತ್ತ 213 ರನ್. ಪಂದ್ಯದ ಆರಂಭದ ಸಮಯದಲ್ಲಿ ಮೋಡ ಕವಿದ ವಾತಾವರಣವಿರುವ ಸಾಧ್ಯತೆ ಇದ್ದು, ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡ್ ಮಾಡಬಹುದು. ಸ್ವಿಂಗ್ ಬೌಲಿಂಗ್‌ಗೆ ಹೆಚ್ಚು ನೆರವು ಸಿಗುವ ನಿರೀಕ್ಷೆ ಇದೆ.
