* ಭಾರತ-ಇಂಗ್ಲೆಂಡ್ ಫೈನಲ್ ಫೈಟ್ ಆರಂಭಕ್ಕೆ ಕ್ಷಣಗಣನೆ* 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿರುವ ಉಭಯ ತಂಡಗಳು* ನಿರ್ಣಾಯಕ ಏಕದಿನ ಪಂದ್ಯಕ್ಕೆ ಮ್ಯಾಂಚೆಸ್ಟರ್‌ನ ಟ್ರೆಂಟ್ ಬ್ರಿಡ್ಜ್ ಮೈದಾನ ಆತಿಥ್ಯ
ಮ್ಯಾಂಚೆಸ್ಟರ್(ಜು.17): ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ ಶಾಕ್‌ನಿಂದ ಕಂಗೆಟ್ಟಿರುವ ಭಾರತ, ಭಾನುವಾರ ನಡೆಯಲಿರುವ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಯೋಜನೆಯನ್ನು ಬದಲಿಸಿಕೊಂಡು ಏಕದಿನ ಸರಣಿಯನ್ನು ಗೆಲ್ಲಲು ಎದುರು ನೋಡುತ್ತಿದೆ. 2ನೇ ಪಂದ್ಯದಲ್ಲಿ ಗೆಲ್ಲಲು 247 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ರೋಹಿತ್ ಶರ್ಮಾ ಪಡೆ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ 100 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಟಿ20 ಸರಣಿಯಲ್ಲಿ ತೋರಿದಂತೆ ಆಕ್ರಮಣಕಾರಿ ಆಟ ಪ್ರದರ್ಶಿಸಬೇಕಿದ್ದು, ಆಗಷ್ಟೇ ಇಂಗ್ಲೆಂಡ್ ಓಟವನ್ನು ನಿಯಂತ್ರಿಸಲು ಸಾಧ್ಯ.
ಹಿರಿಯ ಬ್ಯಾಟರ್‌ಗಳಾದ ಶಿಖರ್ ಧವನ್, ವಿರಾಟ್ ಕೊಹ್ಲಿ ನಿರೀಕ್ಷಿತ ಆಟವಾಡದೆ ಇರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಜೊತೆಗೆ ಮಧ್ಯಮ ಕ್ರಮಾಂಕದಿಂದಲೂ ಜವಾಬ್ದಾರಿಯುತ ಆಟ ಮೂಡಿಬರಬೇಕಿದೆ. ಜಸ್‌ಪ್ರೀತ್ ಬುಮ್ರಾ ನೇತೃತ್ವದ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆಯಾದರೂ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಪರಿಣಾಮಕಾರಿಯಾಗುತ್ತಿಲ್ಲ. ಹೀಗಾಗಿ ಇನ್ನಿಂಗ್ಸ್ ಮಧ್ಯದಲ್ಲಿ ಜೊತೆಯಾಟಗಳನ್ನು ಮುರಿಯುವುದರಲ್ಲಿ ಭಾರತ ಹಿಂದೆ ಬೀಳುತ್ತಿದೆ.
ಮತ್ತೊಂದೆಡೆ ಇಂಗ್ಲೆಂಡ್‌ನ ತಾರಾ ಬ್ಯಾಟಿಂಗ್ ಪಡೆ ಎರಡೂ ಪಂದ್ಯಗಳಲ್ಲಿ ಕಳಪೆ ಆಟವಾಡಿತ್ತು. ಹೀಗಾಗಿ ತಂಡದ ಮೇಲೆ ಸಹಜವಾಗಿಯೇ ಒತ್ತಡವಿದ್ದು, ಅಂತಿಮ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಲು ಕಾಯುತ್ತಿದೆ. ಕಳೆದ ಪಂದ್ಯದ ಪ್ರದರ್ಶನ ಬೌಲಿಂಗ್ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದ್ದು, ಭಾರತೀಯ ಬ್ಯಾಟರ್‌ಗಳಿಗೆ ಮತ್ತೊಂದು ಕಠಿಣ ಸವಾಲು ಎದುರಾದರೆ ಅಚ್ಚರಿಯಿಲ್ಲ.
T20 World cup 2022: 13 ಪಂದ್ಯಗಳಲ್ಲಿ ರೆಡಿಯಾಗಬೇಕು ಟೀಮ್ ಇಂಡಿಯಾ
ಆತಿಥೇಯ ಇಂಗ್ಲೆಂಡ್ ತಂಡದಲ್ಲಿ ಜೇಸನ್ ರಾಯ್, ಜಾನಿ ಬೇರ್‌ಸ್ಟೋವ್, ಜೋ ರೂಟ್, ಜೋಸ್ ಬಟ್ಲರ್ ಅವರಂತಹ ಬಲಾಢ್ಯ ಬ್ಯಾಟರ್‌ಗಳು, ಲಿಯಾಮ್ ಲಿವಿಂಗ್‌ಸ್ಟೋನ್, ಬೆನ್ ಸ್ಟೋಕ್ಸ್, ಮೋಯಿನ್ ಅಲಿಯವರಂತಹ ಸ್ಟಾರ್ ಆಲ್ರೌಂಡರ್‌ಗಳು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದರ ಜತೆಗೆ ರೀಸ್ ಟಾಪ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಮಿಂಚಿನ ದಾಳಿ ನಡೆಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ತಬ್ಬಿಬ್ಬುಗೊಳಿಸಿದ್ದು, ಅಂತಹದ್ದೇ ಪ್ರದರ್ಶನ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ. ರೀಸ್ ಟಾಪ್ಲಿಗೆ ಮತ್ತೊಂದು ತುದಿಯಲ್ಲಿ ಡೇವಿಡ್ ವಿಲ್ಲಿ ಕೂಡಾ ಉತ್ತಮ ಸಾಥ್ ನೀಡುತ್ತಿರುವುದು ಇಂಗ್ಲೆಂಡ್ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ 100 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-1ರ ಸಮಬಲ ಸಾಧಿಸುವಂತೆ ಮಾಡಿದೆ. ಇದೀಗ ಮೂರನೇ ಹಾಗೂ ನಿರ್ಣಾಯಕ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ ಕ್ರಿಕೆಟ್ ತಂಡ : ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಹಲ್, ಪ್ರಸಿದ್ಧ್ ಕೃಷ್ಣ.
ಇಂಗ್ಲೆಂಡ್ ಕ್ರಿಕೆಟ್ ತಂಡ : ಜೇಸನ್ ರಾಯ್, ಜಾನಿ ಬೇರ್‌ಸ್ಟೋವ್, ಜೋ ರೂಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜೋಸ್ ಬಟ್ಲರ್(ನಾಯಕ), ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಡೇವಿಡ್ ವಿಲ್ಲಿ, ಕ್ರೇಗ್ ಓವರ್‌ಟನ್, ಬ್ರೈಡನ್ ಕಾರ್ಸ್, ರೀಸ್ ಟಾಪ್ಲಿ.
ಸ್ಥಳ: ಮ್ಯಾಂಚೆಸ್ಟರ್,
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್
ಪಿಚ್ ರಿಪೋರ್ಚ್
ಟ್ರೆಂಟ್‌ಬ್ರಿಡ್ಜ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಟಾಸ್ ಗೆಲ್ಲುವ ತಂಡಗಳು ಮೊದಲು ಬ್ಯಾಟ್ ಮಾಡುವ ಸಾಧ್ಯತೆ ಹೆಚ್ಚು. ಇಲ್ಲಿ ಮೊದಲ ಇನ್ನಿಂಗ್‌್ಸ ಸರಾಸರಿ ಮೊತ್ತ 281 ರನ್. 2ನೇ ಇನ್ನಿಂಗ್‌್ಸನ ಸರಾಸರಿ ಮೊತ್ತ 262 ರನ್. ಸ್ಪಿನ್ನರ್‌ಗಳಿಗೂ ತಕ್ಕಮಟ್ಟಿಗೆ ನೆರವು ದೊರೆಯುವ ನಿರೀಕ್ಷೆ ಇದೆ.
