ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಲಾರ್ಡ್ಸ್ ಅಂಗಳದಲ್ಲಿ ಐತಿಹಾಸಿಕ ಶತಕ ಸಿಡಿಸಿದರು. ಅವರ ಈ ಅಮೋಘ ಆಟದ ಹೊರತಾಗಿಯೂ ಭಾರತ ಸೋತರೂ, ತಮ್ಮ ಮೇಲಿನ ಟೀಕೆಗಳಿಗೆ ಬ್ಯಾಟ್ ಮೂಲಕವೇ ರೋಹಿತ್ ಖಡಕ್ ಉತ್ತರ ನೀಡಿದ್ದಾರೆ.

ಟೀಮ್ ಇಂಡಿಯಾದ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಅದೆಷ್ಟೋ ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸೇರಿದಂತೆ ಒಟ್ಟು 33 ಶತಕಗಳನ್ನು ಸಿಡಿಸಿರುವ ರೋಹಿತ್, ಇದೀಗ ಲಾರ್ಡ್ಸ್ ಅಂಗಳದಲ್ಲಿ ಬಾರಿಸಿದ ತಮ್ಮ 34ನೇ ಶತಕದ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಈ ಶತಕ ಕೇವಲ ರನ್‌ಗಳ ದಾಖಲೆಯಲ್ಲ, ಬದಲಿಗೆ ತಮ್ಮ ಮೇಲಿದ್ದ ಟೀಕೆಗಳಿಗೆ ಬ್ಯಾಟ್ ಮೂಲಕ ನೀಡಿದ ಖಡಕ್ ಉತ್ತರವಾಗಿತ್ತು.

ಸರಣಿ ಸೋತರೂ ರೋಹಿತ್ ಹೋರಾಟ ವ್ಯರ್ಥ

ಭಾನುವಾರ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ 138 ರನ್ ಗಳಿಸಿದರು. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ ಏಕದಿನ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್ ಅವರ ಈ ಅಮೋಘ ಶತಕ, ಶುಭಮನ್ ಗಿಲ್ (77) ಮತ್ತು ವಿರಾಟ್ ಕೊಹ್ಲಿ (74) ಅವರ ಅರ್ಧಶತಕಗಳ ಹೊರತಾಗಿಯೂ ಭಾರತಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. 388 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ, 7 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿ 27 ರನ್‌ಗಳ ಸೋಲೊಪ್ಪಿಕೊಂಡಿತು. ಇದರೊಂದಿಗೆ ಸರಣಿಯನ್ನು ಇಂಗ್ಲೆಂಡ್ 1-2 ಅಂತರದಿಂದ ವಶಪಡಿಸಿಕೊಂಡಿತು.

39ನೇ ವಯಸ್ಸಿನಲ್ಲೂ ರೋಹಿತ್ ಅವರ ಫಾರ್ಮ್ ಮತ್ತು 2027ರ ವಿಶ್ವಕಪ್ ಆಡುವ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತಿದ್ದವು. ಅಂತಹ ಒತ್ತಡದ ಪರಿಸ್ಥಿತಿಯಲ್ಲಿ ಕಣಕ್ಕಿಳಿದ ರೋಹಿತ್, 110 ಎಸೆತಗಳಲ್ಲಿ 138 ರನ್‌ಗಳ ಅಬ್ಬರದ ಇನಿಂಗ್ಸ್ ಆಡಿದರು. ಶತಕದ ನಂತರ ಅವರು ಬ್ಯಾಟ್ ಎತ್ತಿ ಸಂಭ್ರಮಿಸಲಿಲ್ಲ ಅಥವಾ ಮೆಂಬರ್ಸ್ ಬಾಲ್ಕನಿಯಿಂದ ಬಂದ 'ಸ್ಟ್ಯಾಂಡಿಂಗ್ ಓವೇಶನ್'ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ. ಈ ಮೌನವೇ ಅವರ ಮೇಲಿದ್ದ ಟೀಕೆಗಳಿಗೆ ದೊಡ್ಡ ಉತ್ತರವಾಗಿತ್ತು.

ರೋಹಿತ್ ನಿವೃತ್ತಿ ಬಗ್ಗೆ ಕ್ಯಾಪ್ಟನ್ ಗಿಲ್ ಹೇಳಿದ್ದೇನು?

ಪಂದ್ಯದ ನಂತರ ರೋಹಿತ್ ಶರ್ಮಾ ಅವರ ನಿವೃತ್ತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಾಯಕ ಶುಭಮನ್ ಗಿಲ್, ರೋಹಿತ್ ಭಾಯ್ ನಮಗೆ ಅಂತಹ ಯಾವುದೇ ಸುಳಿವು ನೀಡಿಲ್ಲ. ಇದು ಕೇವಲ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯಷ್ಟೇ. ಕಳೆದ ಹಲವು ವರ್ಷಗಳಿಂದ ಅವರು ವಿಶ್ವದ ವಿವಿಧ ಭಾಗಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು ಆಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ಮೈದಾನ ನಿಧಾನಗತಿಯಲ್ಲಿದ್ದರೂ ಅವರು ರನ್ ಗಳಿಸಿದ ರೀತಿ ಸ್ಫೂರ್ತಿದಾಯಕವಾಗಿತ್ತು.

ರೋಹಿತ್ ಮತ್ತು ಕೊಹ್ಲಿ ವರ್ಷಗಳಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರೋಹಿತ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ವಿಕೆಟ್ ನಿಧಾನವಾಗಿತ್ತು, ಸ್ಟ್ರೋಕ್‌ಗಳನ್ನು ಆಡಲು ಕಷ್ಟವಾಯಿತು ಎಂದು ಕ್ಯಾಪ್ಟನ್ ಗಿಲ್ ಹೇಳಿದರು. ರೋಹಿತ್ ಶರ್ಮಾ ಅವರ ಬ್ಯಾಟ್‌ನಿಂದ ಬಂದ ಈ 34ನೇ ಶತಕವು ಭಾರತಕ್ಕೆ ಗೆಲುವು ತಂದುಕೊಡದಿದ್ದರೂ, ಅವರಲ್ಲಿ ಇನ್ನೂ ಕ್ರಿಕೆಟ್ ಬಾಕಿ ಇದೆ ಮತ್ತು ಅವರು ತಂಡಕ್ಕೆ ಎಷ್ಟು ಮುಖ್ಯ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ರವಾನಿಸಿದೆ.