ಅಹಮದಾಬಾದ್(ಮಾ.18)‌: ಮೊದಲ ಪಂದ್ಯದ ಸೋಲಿನ ಬಳಿಕ ಸಿಡಿದಿದ್ದ ಭಾರತ, 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿತ್ತು. ಆದರೆ, 3ನೇ ಪಂದ್ಯದಲ್ಲಿ ಸೋಲುಂಡಿದ್ದು, ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯನ್ನು ಕಳೆದುಕೊಳ್ಳುವ ಭೀತಿಗೆ ಗುರಿಯಾಗಿದೆ. ಹೀಗಾಗಿ ಇಲ್ಲಿನ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ನಾಲ್ಕನೇ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಸರಣಿಯಲ್ಲಿ ಮೊದಲು ಬ್ಯಾಟ್‌ ಮಾಡಿದ ಎರಡೂ ಪಂದ್ಯದಲ್ಲೂ ಭಾರತ ಸೋಲುಂಡಿದ್ದು, ಚೇಸ್‌ ಮಾಡಿ 2ನೇ ಪಂದ್ಯದಲ್ಲಿ ಜಯ ಸಾಧಿಸಿದೆ. ಹೀಗಾಗಿ ಟಾಸ್‌ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆದರೆ, ಇನ್ನೇನು ಕೆಲ ತಿಂಗಳಲ್ಲೇ ತವರಿನಲ್ಲಿ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ ಮೇಲೆ ಕಣ್ಣೀಟ್ಟಿರುವ ಭಾರತ, ಚೇಸಿಂಗ್‌ನಲ್ಲಿ ಮಾತ್ರವಲ್ಲ 2ನೇ ಇನ್ನಿಂಗ್ಸ್‌ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲೂ ನಾವು ಸಮರ್ಥರು ಎಂಬುದನ್ನು ಸಾಬೀತು ಪಡಿಸಲು ಇದು ಉತ್ತಮ ವೇದಿಕೆ ಆಗಿದೆ.

ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ:

ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿದ್ದು, ತಂಡದ ವಿಶ್ವಾಸ ಇಮ್ಮಡಿಗೊಳಿಸಿದೆ. ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಕೊಹ್ಲಿ, ಮುಂದಿನ ಎರಡೂ ಪಂದ್ಯಗಳಲ್ಲೂ ಅರ್ಧಶತಕ ಬಾರಿಸಿದ್ದು, ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಆದರೆ, ಕೆ.ಎಲ್‌.ರಾಹುಲ್‌ ಲಯ ಕಂಡುಕೊಳ್ಳಲು ಒದ್ದಾಡುತ್ತಿದ್ದು, ತಂಡಕ್ಕೆ ಭಾರೀ ಪೆಟ್ಟು ಕೊಡುತ್ತಿದೆ.

ಕನ್ನಡಿಗ ಕೆ.ಎಲ್‌. ರಾಹುಲ್‌ಗೆ ಸಿಗುತ್ತಾ ಮತ್ತೊಮ್ಮೆ ಚಾನ್ಸ್‌?

ರಾಹುಲ್‌ ಬೆಂಬಲಕ್ಕೆ ನಿಂತ ವಿರಾಟ್‌: ಆದಾಗ್ಯೂ ಅವರ ಮೇಲೆ ವಿರಾಟ್‌ಗೆ ಅಗಾಧ ನಂಬಿಕೆಯಿದ್ದು, ‘ಕಳೆದ 2-3 ವರ್ಷಗಳ ಅಂಕಿ-ಅಂಶಗಳನ್ನು ನೋಡಿ, ಟಿ20ಯಲ್ಲಿ ಎಲ್ಲರಿಗಿಂತ ರಾಹುಲ್‌ ಉತ್ತಮ. ರೋಹಿತ್‌ ಜತೆಗೆ ಅಗ್ರ ಕ್ರಮಾಂಕದಲ್ಲಿ ರಾಹುಲ್‌ ಮುಂದುವರೆಯಲಿದ್ದಾರೆ. ಸದ್ಯಕ್ಕೆ ನಾವು ಬೇರೆ ಆಯ್ಕೆಯತ್ತ ಗಮನ ಹರಿಸಿಲ್ಲ’ ಎಂದಿದ್ದಾರೆ.

ತಂಡಕ್ಕೆ ಮರಳಿರುವ ಅನುಭವಿ ರೋಹಿತ್‌ ಶರ್ಮಾ ಅನುಭವಕ್ಕೆ ತಕ್ಕ ಆಟವಾಡಬೇಕಿದೆ. ಇಶಾನ್‌ ಕಿಶನ್‌, ರಿಷಭ್‌ ಪಂತ್‌ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ, ವಾಷಿಂಗ್‌ಟನ್‌ ಸುಂದರ್‌ ಉತ್ತಮ ಪ್ರದರ್ಶನ ನೀಡುತ್ತಿದ್ದು, 4ನೇ ಪಂದ್ಯದಲ್ಲಿ 3ನೇ ಆಲ್ರೌಂಡರ್‌ ಅನ್ನು ಕೊಹ್ಲಿ ಕಣಕ್ಕಿಳಿಸಿದರೂ ಅಚ್ಚರಿ ಇಲ್ಲ. ಆಗಾಗಿ ರಾಹುಲ್‌ ತಿವಾಟಿಯಾ ಹಾಗೂ ಅಕ್ಷರ್‌ ಪಟೇಲ್‌ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ. ಹೀಗಾಗಿ ಸದೃಢ ಬ್ಯಾಟಿಂಗ್‌ ಪಡೆ ಹೊಂದಿರುವ ಭಾರತ, ತಿರುಗಿ ಬಿದ್ದರೆ ಅಚ್ಚರಿಯೇನಿಲ್ಲ.

ಇನ್ನು ತಂಡದ ಪ್ರಮುಖ ಸ್ಪಿನ್‌ ಅಸ್ತ್ರ ಯಜುವೇಂದ್ರ ಚಹಲ್‌ ದುಬಾರಿ ಆಗುತ್ತಿದ್ದು, ತಂಡಕ್ಕೆ ಬಿಸಿತುಪ್ಪವಾಗಿದೆ. ಪಾಂಡ್ಯ ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ವಿಭಾಗದಲ್ಲೂ ಮಿಂಚುತ್ತಿದ್ದು, ಸಮಾಧಾನದ ಸಂಗತಿಯಾಗಿದೆ. ಭುವನೇಶ್ವರ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು, ಅವರು ತಮ್ಮ ದಾಳಿಯನ್ನು ಮತ್ತಷ್ಟು ಮೊನಚುಗೊಳಿಸಬೇಕಿದೆ. ವಾಷಿಂಗ್‌ಟನ್‌ ಸುಂದರ್‌ ಸಹ ಬೌಲರ್‌ಗಳಿಗೆ ಉತ್ತಮ ಸಾಥ್‌ ನೀಡುತ್ತಿದ್ದು, ಬೌಲರ್‌ಗಳು ಸ್ಥಿರತೆ ಕಾಯ್ದುಕೊಳ್ಳಬೇಕಿದೆ.

ಬಲ ತುಂಬಿದ ವುಡ್‌: ಅತ್ತ ವೇಗಿ ಮಾರ್ಕ್‌ವುಡ್‌ ಪುನಾರಗಮನ ಇಂಗ್ಲೆಂಡ್‌ ತಂಡಕ್ಕೆ ಮತ್ತಷ್ಟು ಬಲ ತುಂಬಿದ್ದು, ವುಡ್‌ ಹಾಗೂ ಜೋಫ್ರಾ ಆರ್ಚರ್‌ ಜೋಡಿ ಭಾರತ ತಂಡವನ್ನು 3ನೇ ಪಂದ್ಯದಲ್ಲಿ ಬಹುವಾಗಿ ಕಾಡಿತ್ತು. ಜೋರ್ಡನ್‌, ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರ್ರನ್‌ ಇಂಗ್ಲೆಂಡ್‌ನ ಪ್ರಮುಖ ಟ್ರಂಪ್‌ ಕಾರ್ಡ್‌ಗಳಾಗಿದ್ದಾರೆ. ಇನ್ನು ಬ್ಯಾಟಿಂಗ್‌ ವಿಭಾಗದಲ್ಲಿ ಜೇಸನ್‌ ರಾಯ್‌, ಡೇವಿಡ್‌ ಮಲಾನ್‌, ಜೋಸ್‌ ಬಟ್ಲರ್‌, ಜಾನಿ ಬೇರ್‌ಸ್ಟೋವ್‌ರಂತಹ ಘಟಾನುಘಟಿ ದಾಂಡಿಗರ ದಂಡೇ ಇಂಗ್ಲೆಂಡ್‌ ಪಡೆಯಲಿದ್ದು, ಭಾರತದ ಹಾದಿ ಅಂದುಕೊಂಡಷ್ಟುಸುಲಭವಾಗಿಲ್ಲ.

ಪಿಚ್‌ ರಿಪೋರ್ಟ್‌: ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯದಲ್ಲೂ ಚೇಸಿಂಗ್‌ ಮಾಡಿದ ತಂಡವೇ ಜಯ ಸಾಧಿಸಿದ್ದು, ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ. ಸ್ಪಿನ್ನರ್‌ಗಳ ಜತೆಗೆ ವೇಗಿಗಳು ಮಿಂಚುತ್ತಿದ್ದು, ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ದಂಡೇ ಇದ್ದರೂ ದೊಡ್ಡ ಮೊತ್ತ ದಾಖಲಾಗದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಬೌಲರ್‌ಗಳ ದಿಟ್ಟಸವಾಲನ್ನು ಮೀರಿ ಬ್ಯಾಟ್ಸ್‌ಮನ್‌ಗಳು ನಿಲ್ಲಬೇಕಿದೆ.

ಸಂಭವನೀಯ ತಂಡ:

ಭಾರತ: ರಾಹುಲ್‌, ರೋಹಿತ್‌ ಶರ್ಮಾ, ಇಶಾನ್‌ ಕಿಶನ್‌, ವಿರಾಟ್‌ ಕೊಹ್ಲಿ(ನಾಯಕ), ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್‌ಟನ್‌ ಸುಂದರ್‌, ಶಾರ್ದೂಲ್‌ ಠಾಕೂರ್‌, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌

ಇಂಗ್ಲೆಂಡ್‌: ಜೇಸನ್‌ ರಾಯ್‌, ಜೋಸ್‌ ಬಟ್ಲರ್‌(ನಾಯಕ), ಡೇವಿಡ್‌ ಮಿಲಾನ್‌, ಜಾನಿ ಬೇರ್‌ಸ್ಟೋವ್‌, ಇಯಾನ್‌ ಮಾರ್ಗನ್‌, ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರ್ರನ್‌, ಕ್ರಿಸ್‌ ಜೋರ್ಡನ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌, ಮಾರ್ಕ್‌ವುಡ್

ಸ್ಥಳ: ಅಹಮದಾಬಾದ್‌
ಪಂದ್ಯ: ಸಂಜೆ 7ಕ್ಕೆ, 
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್