ಲೀಡ್ಸ್‌ನಲ್ಲಿ ಮೊದಲ ಟೆಸ್ಟ್‌ ಸೋತಿರುವ ಭಾರತ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ. ಬುಮ್ರಾ ಆಡುವ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಇಂಗ್ಲೆಂಡ್‌ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ಬರ್ಮಿಂಗ್‌ಹ್ಯಾಮ್‌: ಗೆಲ್ಲಬಹುದಾಗಿದ್ದ ಮೊದಲ ಪಂದ್ಯವನ್ನು ತನ್ನ ಎಡವಟ್ಟುಗಳಿಂದಾಗಿಯೇ ಕೈಚೆಲ್ಲಿದ್ದ ಭಾರತ ತಂಡ ಈಗ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನ ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಬುಧವಾರದಿಂದ ಇಂಗ್ಲೆಂಡ್‌ ವಿರುದ್ಧ 2ನೇ ಪಂದ್ಯ ಆರಂಭಗೊಳ್ಳಲಿದ್ದು, ಶುಭ್‌ಮನ್‌ ಗಿಲ್‌ ನಾಯಕತ್ವದ ಟೀಂ ಇಂಡಿಯಾ ಸರಣಿ ಸಮಬಲದ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಅತ್ತ ಇಂಗ್ಲೆಂಡ್‌ ಸತತ 2ನೇ ಟೆಸ್ಟ್‌ ಗೆಲುವಿನೊಂದಿಗೆ ಸರಣಿಯಲ್ಲಿ 2-0 ಮುನ್ನಡೆಯ ಕಾತರದಲ್ಲಿದೆ.

ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಲೀಡ್ಸ್‌ ಟೆಸ್ಟ್‌ ಆಡಿದ್ದ ಭಾರತ ಪಂದ್ಯದುದ್ದಕ್ಕೂ ಗೆಲ್ಲುವ ನೆಚ್ಚಿನ ತಂಡವಾಗಿಯೇ ಉಳಿದಿತ್ತು. ಆದರೆ ತಂಡದ ನಿರೀಕ್ಷೆ ಬುಡಮೇಲಾಗಿತ್ತು. ಇಂಗ್ಲೆಂಡ್‌ 371 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿ ಜಯಗಳಿಸಿತ್ತು.

ವೇಗಿ ಬುಮ್ರಾ ಗೈರು?: 

ಭಾರತ ಈ ಪಂದ್ಯಕ್ಕೆ ಹಲವು ಗೊಂದಲಗಳಿಂದಲೇ ಕಣಕ್ಕಿಳಿಯಲಿದೆ. ತಂಡದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ ಕಾರ್ಯದೊತ್ತಡ ಕಾರಣಕ್ಕೆ ಈ ಸರಣಿಯಲ್ಲಿ ಕೇವಲ 3 ಪಂದ್ಯ ಆಡಲಿದ್ದಾರೆ. ಅಂದರೆ, ಮೊದಲ ಟೆಸ್ಟ್‌ನಲ್ಲಿ ಆಡಿದ್ದ ಬುಮ್ರಾ, ಇನ್ನುಳಿದ 4 ಟೆಸ್ಟ್‌ಗಳ ಪೈಕಿ 2ರಲ್ಲಿ ಕಣಕ್ಕಿಳಿಯಲಿದ್ದಾರೆ. ಅವರನ್ನು 2ನೇ ಟೆಸ್ಟ್‌ನಲ್ಲಿ ಆಡಿಸಲಾಗುತ್ತದೆಯೋ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಒಂದು ವೇಳೆ ಬುಮ್ರಾ ಗೈರಾದರೆ ತಂಡದ ವೇಗದ ಬೌಲಿಂಗ್‌ ಪಡೆ ಮತ್ತಷ್ಟು ಬಲ ಕಳೆದುಕೊಳ್ಳಲಿದೆ.

ಮೊಹಮ್ಮದ್‌ ಸಿರಾಜ್‌ ಉತ್ತಮ ಫಿಟ್ನೆಸ್‌ ಹೊಂದಿದ್ದರೂ, ಈಗೀಗ ವಿಕೆಟ್‌ ಪಡೆಯಲು ವಿಫಲರಾಗುತ್ತಿದ್ದಾರೆ. ಪ್ರಸಿದ್ಧ್‌ ಕೃಷ್ಣ ವಿಕೆಟ್‌ ಪಡೆಯುತ್ತಿದ್ದರೂ ತಪ್ಪು ಎಸೆತಗಳೇ ಜಾಸ್ತಿ ಕಂಡುಬರುತ್ತಿದೆ. ಇವರಿಬ್ಬರನ್ನೂ ಈ ಟೆಸ್ಟ್‌ನಲ್ಲಿ ಆಡಿಸಿ, ಬೂಮ್ರಾ ಸ್ಥಾನಕ್ಕೆ ಅರ್ಶ್‌ದೀಪ್‌ ಸಿಂಗ್‌ರನ್ನು ಆಡಿಸಲಾಗುತ್ತದೆಯೋ ಅಥವಾ ಹೆಚ್ಚುವರಿ ಸ್ಪಿನ್ನರ್‌ನ ಕಣಕ್ಕಿಳಿಸಲಾಗುತ್ತೆಯೋ ಎಂಬು ಗೊಂದಲವಿದೆ.

ವಾಷಿಂಗ್ಟನ್‌/ಕುಲ್ದೀಪ್‌ ಕಣಕ್ಕೆ?: 

ಭಾರತ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆ ಬಗ್ಗೆ ಸಹಾಯಕ ಕೋಚ್‌ ರ್‍ಯಾನ್‌ ಟೆನ್‌ ಡೊಶ್ಕ್ಯಾಟೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಜಡೇಜಾ ಜೊತೆ ವಾಷಿಂಗ್ಟನ್‌ ಸುಂದರ್‌ ಅಥವಾ ಕುಲ್ದೀಪ್‌ ಯಾದವ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಆಲ್ರೌಂಡರ್‌ ಸ್ಥಾನಕ್ಕೆ ಶಾರ್ದೂಲ್‌ ಠಾಕೂರ್‌ ಬದಲು ನಿತೀಶ್‌ ಕುಮಾರ್‌ ರೆಡ್ಡಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ಉಳಿದಂತೆ ಬ್ಯಾಟಿಂಗ್‌ ವಿಭಾಗದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಇಲ್ಲ. ಕರುಣ್‌ ನಾಯರ್‌, ಸಾಯಿ ಸುದರ್ಶನ್‌ಗೆ ಮತ್ತೊಂದು ಅವಕಾಶ ಸಿಗುವ ನಿರೀಕ್ಷೆಯಿದೆ.

ಇಂಗ್ಲೆಂಡ್‌ಗೆ 2-0 ಗುರಿ: 

ಅನುಭವಿ ಬೌಲರ್‌ಗಳ ಅನುಪಸ್ಥಿತಿಯಲ್ಲೂ ಮೊದಲ ಟೆಸ್ಟ್‌ ಗೆದ್ದಿದ್ದ ಇಂಗ್ಲೆಂಡ್‌ ಆತ್ಮವಿಶ್ವಾಸದಿಂದಲೇ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಎಜ್‌ಬಾಸ್ಟನ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ತಂಡ, ಮೊದಲ ಟೆಸ್ಟ್‌ನಲ್ಲಿ ಆಡಿದ್ದ ತಂಡವನ್ನೇ ಉಳಿಸಿಕೊಂಡಿದೆ.

ಒಟ್ಟು ಮುಖಾಮುಖಿ: 137

ಭಾರತ: 35

ಇಂಗ್ಲೆಂಡ್‌: 52

ಡ್ರಾ: 50

ಆಟಗಾರರ ಪಟ್ಟಿ:

ಭಾರತ(ಸಂಭವನೀಯ): ಜೈಸ್ವಾಲ್‌, ರಾಹುಲ್‌, ಸುದರ್ಶನ್‌, ಗಿಲ್‌(ನಾಯಕ), ರಿಷಭ್‌, ಕರುಣ್‌, ಜಡೇಜಾ, ನಿತೀಶ್‌, ಬೂಮ್ರಾ/ವಾಷಿಂಗ್ಟನ್‌/ಕುಲ್ದೀಪ್‌, ಸಿರಾಜ್‌, ಪ್ರಸಿದ್ಧ್‌.

ಇಂಗ್ಲೆಂಡ್‌(ಆಡುವ 11): ಜ್ಯಾಕ್‌ ಕ್ರಾವ್ಲಿ, ಬೆನ್‌ ಡಕೆಟ್‌, ಪೋಪ್‌, ರೂಟ್‌, ಬ್ರೂಕ್‌, ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್‌, ವೋಕ್ಸ್‌, ಬ್ರೈಡನ್‌ ಕಾರ್ಸ್‌, ಜೋಶ್‌ ಟಂಗ್‌, ಬಶೀರ್‌.

ಪಂದ್ಯ: ಮಧ್ಯಾಹ್ನ 3.30ರಿಂದ(ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌.

ಪಿಚ್ ರಿಪೋರ್ಟ್‌

ಎಜ್‌ಬಾಸ್ಟನ್‌ ಕ್ರೀಡಾಂಗಣದ ಇತಿಹಾಸ ಗಮನಿಸಿದರೆ ಇಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ಮೊದಲೆರಡು ದಿನ ವೇಗದ ಬೌಲರ್‌ಗಳು ಹೆಚ್ಚಿನ ಪ್ರಾಬಲ್ಯ ಸಾಧಿಸಿದರೂ, ಬಳಿಕ ಬ್ಯಾಟರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ. ಕೊನೆ ದಿನ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು.